ಕೀಳರಿಮೆ ಮನೋಭಾವ ತೊರೆದು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು

17
Published on

ಮೈಸೂರು: ವಿದ್ಯಾರ್ಥಿಗಳು ಹಿಂಜರಿಕೆ, ಕೀಳರಿಮೆ ಮನೋಭಾವ ತೊರೆದು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಲೇಖಕ ಟಿ. ಸತೀಶ್ ಜವರೇಗೌಡ ಹೇಳಿದರು.
ಮೈಸೂರು ತಾಲೂಕಿನ ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ‘ಮಕ್ಕಳ ಹಕ್ಕುಗಳು’ ಕುರಿತು ಅವರು ಮಾತನಾಡಿದರು.
ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ವಿಕಾಸಕ್ಕಾಗಿ ನಲವತ್ತಕ್ಕೂ ಅಧಿಕ ಹಕ್ಕುಗಳಿವೆ. ಇಂತಹ ಹಕ್ಕುಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಬೇಕು. ಈ ಹಕ್ಕುಗಳ ನೆರವಿನಿಂದ ಮಕ್ಕಳು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಮುಂದಾಗಬೇಕು. ಹಕ್ಕುಗಳಿಗೆ ಧಕ್ಕೆ ಒದಗಿದಾಗ ಪ್ರಶ್ನಿಸಲು ಹಿಂಜರಿಯಬಾರದು ಎಂದರು.
ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ವಿದ್ಯಾರ್ಥಿಗಳಿಗೆ ಎಲ್ಲ ಹಕ್ಕುಗಳನ್ನು, ಹೆಚ್ಚಿನ ಅವಕಾಶಗಳನ್ನು ದೊರಕಿಸಿಕೊಡಲಾಗಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ಉತ್ತಮ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಕಿಯರಾದ ಪಿ.ಎಲ್. ಭಾಗ್ಯಾ, ಕೆ. ಪುಷ್ಪಲತಾ, ಸರಸ್ವತಿ, ಶ್ರೀದೇವಿ, ಶಿಕ್ಷಕ ರಂಗಸ್ವಾಮಿ, ಅತಿಥಿ ಶಿಕ್ಷಕರಾದ ಪುನೀತ್‌ಕುಮಾರ್, ರೂಪಾ ಇದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಮನೋರಂಜನಾ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net