

ಬೆಳಗಾವಿ: ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶನಕ್ಕೆ ಹಿಂಜರಿಯಬಾರದು. ಕೀಳರಿಮೆ ತೊರೆದು, ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಹನುಮಂತ ಮೇಲಿನಮನಿ ಹೇಳಿದರು.
ನಗರದ ಜಿ.ಎ. ಪ್ರೌಢಶಾಲೆಯ ವಿವಿಧ ಸಂಘಗಳ ಒಕ್ಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಓದಿನ ಜತೆಗೆ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಪ್ರತಿಭೆ ಪ್ರದರ್ಶಿಸಬೇಕು ಎಂದರು.
ನಮ್ಮಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಬಹಳಷ್ಟು ಇದ್ದಾರೆ. ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕಾಗಿದೆ. ವಿದ್ಯಾರ್ಥಿಗಳು ಮತ್ತೊಬ್ಬರ ವಿಚಾರವನ್ನು ಇಟ್ಟುಕೊಂಡು ಬದುಕುವುದನ್ನು ಬಿಡಬೇಕು. ಸ್ವಂತ ವಿಚಾರಧಾರೆ ಇಟ್ಟುಕೊಂಡು ಬದುಕುವ ಕಲೆ ರೂಢಿಸಿಕೊಳ್ಳಬೇಕು. ಅಂದಾಗ ಮುಂದೆ ಬರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಎಸ್.ಆರ್. ಗದಗ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಆರ್.ಎಂ. ಮಗದುಮ್, ಹಿರಿಯ ಶಿಕ್ಷಕ ಪಿ.ಎಸ್. ನಿಡೋಣಿ, ಎ.ಆರ್. ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಪತ್‌ಕುಮಾರ ಪಾಟೀಲ, ಉಷಾ ರಾಠೋಡ ವೇದಿಕೆಯಲ್ಲಿದ್ದರು. ಅಲ್ಕಾ ಪಾಟೀಲ ಸ್ವಾಗತಿಸಿದರು. ಕೆ.ಆರ್.ಪಟ್ಟಣ ಪರಿಚಯಿಸಿದರು. ಸಿ.ಎಂ. ಪಾಗಾದ ನಿರೂಪಿಸಿದರು. ಎಸ್.ಕೆ.ದೇಸಾಯಿ ವಂದಿಸಿದರು.