

ಲೋಕಾಪುರ: ಜಗತ್ತಿನಲ್ಲಿ ನಿಸರ್ಗಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ, ಅದನ್ನು ಪ್ರೀತಿಸುತ್ತ ದ್ವೇಷ ಬಿಟ್ಟು ಪ್ರೇಮದ ಬದುಕು ಕಟ್ಟಿಕೊಳ್ಳಬೇಕೆಂದು ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಚಿಂಚಖಂಡಿ ಬಿ.ಕೆ. ಗ್ರಾಮದ ಪಾಂಡುರಂಗ ಗೂಳಿ ಬಸವೇಶ್ವರ ದೇವಸ್ಥಾನದ ಹತ್ತಿರ, ಗಜಾನನ ಯುವಕ ಮಂಡಳಿ ವತಿಯಿಂದ ಹಮ್ಮಿಕೊಂಡ ಆಧ್ಮಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಗಳು ನಿಸರ್ಗದಲ್ಲಿ ಸಿಗುವ ಮಣ್ಣು, ನೀರು, ಗಾಳಿ ಎಂದಿಗೂ ಕಲುಷಿತಗೊಳಿಸಬಾರದು. ಪ್ರಕೃತಿ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬದುಕನ್ನು ಉತ್ತಮ ವಿಚಾರಗಳಿಗೆ ಉಪಯೋಗಿಸಬೇಕು. ಕೆಟ್ಟ ಚಟಗಳಿಂದ ದೂರ ಇರಬೇಕು. ಗಲೀಜು ನೀರು ಕುಡಿದು ಬೆಳೆದ ತೆಂಗಿನ ಮರ ಬಹು ಉಪಯೋಗಿಯಾಗಿದೆ. ಮುಸುರಿ ನೀರು ಕುಡಿದ ಹಸು ಹಾಲು, ಮೊಸರು, ತುಪ್ಪ ನೀಡುತ್ತದೆ. ಅದರಂತೆ ಮನುಷ್ಯ ಪ್ರಕೃತಿಯ ಋಣ ಉಂಡು ಸಮಾಜಮುಖಿಯಾಗಿರಬೇಕು ಎಂದರು.
ಪ್ರಪಂಚದಲ್ಲಿ ನಾವೆಲ್ಲರೂ ನೆಪ ಮಾತ್ರ, ಮನುಷ್ಯ ನಿಸರ್ಗ ಹಾಳು ಮಾಡಬಾರದು. ಕಾಲ ಕೆಟ್ಟಿದೆ ಎಂದು ಹೇಳುತ್ತಾರೆ. ಆದರೆ, ಕಾಲ ಕೆಟ್ಟಿಲ್ಲ ಮನುಷ್ಯನ ಮನಸ್ಸು ಕೆಟ್ಟಿದೆ. ಉತ್ತಮ ವಿಚಾರಗಳನ್ನು ಕಲಿಯಬೇಕು, ಜೀವನದಲ್ಲಿ ನಿರಾಸೆ, ದುಃಖ, ಸುಖ, ದುಮ್ಮಾನ, ಸಂತೋಷವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಮೆಳ್ಳಿಗೇರಿ ಗ್ರಾಮದ ಶ್ರದ್ಧಾನಂದ ಮಠದ ಜ್ಞಾನಮಯಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಖಜ್ಜಿಡೋಣಿ ಕೃಷ್ಣಾನಂದ ಶಾಸ್ತ್ರಿಗಳು, ಚಿಂಚಖಂಡಿ ಬಿ.ಕೆ. ಗ್ರಾಮದವರಾದ ಶಿವಕುಮಾರ ಹಿರೇಮಠ, ಸಿದ್ರಾಮಯ್ಯ ಹಿರೇಮಠ ಸ್ವಾಮಿಗಳು, ಗ್ರಾಮಸ್ಥರಾದ ತಮ್ಮಣ್ಣಪ್ಪ ಅರಳಿಕಟ್ಟಿ, ಹೊಳಬಸು ಗಂಟಿ, ಹೊಳಬಸು ಗಂಟಿ, ಗೋವಿಂದಗೌಡ ಪಾಟೀಲ, ಸಂಗಪ್ಪ ಹಿರೇಸೋಮಣ್ಣವರ, ಹಣಮಪ್ಪ ಪಿಟಕ, ಭೀಮಪ್ಪ ಅರಳಿಕಟ್ಟಿ, ಗಜಾನನ ಯುವಕ ಮಂಡಳ, ವಿವಿಧ ಗ್ರಾಮದ ಸದ್ಭಕ್ತ ಮಂಡಳಿ ಹಾಗೂ ಚಿಂಚಖಂಡಿ ಬಿ.ಕೆ. ಗ್ರಾಮಸ್ಥರು ಇದ್ದರು.