ಸ್ವಾವಲಂಬಿಗಳಾಗಲು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲಿ

ಹುಣಸೂರು ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಎ.ರಾಮೇಗೌಡ, ಡಾ.ಮಹಾದೇಬಾಯಿ, ನಟಿ ಅಮೃತಾ ಅಯ್ಯಂಗಾರ್, ತಟ್ಟೆಕರೆ ಶ್ರೀನಿವಾಸ್ ಇದ್ದರು.
ಹುಣಸೂರು ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಎ.ರಾಮೇಗೌಡ, ಡಾ.ಮಹಾದೇಬಾಯಿ, ನಟಿ ಅಮೃತಾ ಅಯ್ಯಂಗಾರ್, ತಟ್ಟೆಕರೆ ಶ್ರೀನಿವಾಸ್ ಇದ್ದರು.
Published on

ಹುಣಸೂರು: ಹೆಣ್ಣುಮಕ್ಕಳು ಶಿಕ್ಷಿತರಾದಲ್ಲಿ ಮಾತ್ರ ಸ್ವಾವಲಂಬಿ ಮತ್ತು ಆತ್ಮವಿಶ್ವಾಸದ ಬದುಕು ನಡೆಸಲು ಸಾಧ್ಯ ಎಂದು ಮೈಸೂರು ಜಿಲ್ಲೆ(ಗ್ರಾಮಾಂತರ) ಅಬಕಾರಿ ಇಲಾಖೆ ಉಪ ಆಯುಕ್ತೆ ಡಾ.ಮಹಾದೇವಿ ಬಾಯಿ ಅಭಿಪ್ರಾಯಪಟ್ಟರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಮತ್ತು ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್ನೆಸ್ಸೆಸ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

19ನೇ ಶತಮಾನದಲ್ಲಿ ಸಾವಿತ್ರಿ ಬಾಯಿ ಫುಲೆ ಹೆಣ್ಣುಮಕ್ಕಳಿಗೆ ಶಾಲೆ ತೆರೆಯುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದ್ದರು. ಇಂದು ಆಧುನಿಕತೆ ನಮ್ಮನ್ನು ಆವರಿಸಿದೆ. ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ತಾವಾಗಿಯೇ ಮುಂದೆ ಬರುತ್ತಿದ್ದಾರೆ. ಪಾಲಕರೂ ಕೂಡ ಬೆಂಬಲಿಸುತ್ತಿದ್ದಾರೆ. ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ. ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣ ಎನ್ನುವುದು ಆತ್ಮವಿಶ್ವಾಸದ ಸಂಕೇತ ಎಂದು ಹೇಳಿದರು.

ಚಲನಚಿತ್ರ ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, ಹೆಣ್ಣುಮಕ್ಕಳು ಅಕ್ಷರಸ್ಥರಾದರೆ ಕುಟುಂಬ ಮತ್ತು ಸಮುದಾಯ ಅಭಿವೃದ್ಧಿಪಥದತ್ತ ಸಾಗುತ್ತದೆ. ಹುಣಸೂರು ಕಲೆ, ಸಾಹಿತ್ಯ ಮತ್ತು ಪರಂಪರೆಗಳ ಸಂಗಮಕ್ಷೇತ್ರವಾಗಿದೆ. ಚಲನಚಿತ್ರ ಕ್ಷೇತ್ರದ ಮೂಲ ಉದ್ದೇಶ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಅರಿವು ಮೂಡಿಸುವುದಾಗಿದೆ. ನಾನು ನಟಿಸಿದ ಚಿತ್ರಗಳು ಈ ಸಾಲಿಗೆ ಸೇರುತ್ತಿದೆ ಎನ್ನುವುದೇ ನನ್ನ ಹೆಮ್ಮೆ ಎಂದರು.

ಪ್ರಾಂಶುಪಾಲ ಎ.ರಾಮೇಗೌಡ ಅಧ್ಯಕ್ಷೀಯ ಭಾಷಣ ಮಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ತಟ್ಟೆಕೆರೆ ಶ್ರೀನಿವಾಸ್ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಎಚ್.ಎನ್.ಗಿರೀಶ್ ಕಳೆದ ಸಾಲಿನ ಕಾರ್ಯಕ್ರಮಗಳ ಕುರಿತು ವರದಿ ನೀಡಿದರು. ಸಿಡಿಸಿ ಸಮಿತಿ ಸದಸ್ಯರಾದ ಕೆ.ಕೃಷ್ಣ, ಶಿವಕುಮಾರ್, ಮಮತಾ ಗಜೇಂದ್ರ, ಕೆ.ಎಚ್.ವೀರಭದ್ರಪ್ಪ, ಅಶೋಕ್, ಪ್ರಾಧ್ಯಾಪಕರಾದ ಡಾ.ಪಿ.ಜೆ.ಕೃಷ್ಣ, ಡಿ.ಎಸ್.ಸ್ವಾಮಿ, ಎನ್.ಆರ್.ರಾಜೇಶ್ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು. ವಿದ್ಯಾರ್ಥಿನಿಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net