ಗಾಂಧೀಜಿ ಆದರ್ಶ ಮಾದರಿಯಾಗಲಿ

13_03_Mdy_Prasasthi Pradana
Published on

ಮಂಡ್ಯ: ಮಹಾತ್ಮ ಗಾಂಧೀಜಿ ಅವರು ಬದುಕಿದ ರೀತಿ ಮತ್ತು ಅನುಸರಿಸಿದ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು ಎಂದು ರಾಜ್ಯ ಗೆಜೆಟಿಯರ್‌ನ ನಿವೃತ್ತ ಸಂಪಾದಕ ಎಸ್.ರಾಜೇಂದ್ರಪ್ಪ ಹೇಳಿದರು.

ದಿ.ಎಸ್.ವಿಶ್ವನಾಥ್ ಸಂಸ್ಮರಣಾ ಸಮಿತಿ, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ವತಿಯಿಂದ ನಗರದ ಗಾಂಧಿಭವನದಲ್ಲಿ ಗುರುವಾರ ಆಯೋಜಿಸಿದ್ದ ದಿ.ಎಸ್.ವಿಶ್ವನಾಥ್ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸ್ವಾತಂತ್ರೃ ಚಳವಳಿಯ ಭಾಗವಾಗಿ ಮಹಾತ್ಮಾ ಗಾಂಧೀಜಿ ಅವರು 1930 ಮಾ.12ರಂದು ಆರಂಭಿಸಿದ ದಂಡಿಯಾತ್ರೆ ಇಡೀ ವಿಶ್ವದ ಗಮನ ಸೆಳೆದಿತ್ತು. ಪರಿಣಾಮ ಹಲವು ರಾಷ್ಟ್ರಗಳು ಬೆರಗಾಗಿ ಭಾರತದತ್ತ ತಿರುಗಿ ನೋಡಿದ್ದವು. ದಂಡಿಯಾತ್ರೆ ನಡೆದ ದಿನದಂದು ಗಾಂಧಿವಾದಿಯೊಬ್ಬರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಮಹತ್ವದ ವಿಚಾರ ಎಂದರು.

ಮಹಾತ್ಮ ಗಾಂಧೀಜಿ ಅವರು ವ್ಯಕ್ತಿಯಾಗಿ ಹುತಾತ್ಮರಾಗಿದ್ದಾರೆ. ಅವರ ಆದರ್ಶಗಳು ಸರ್ವಕಾಲಕ್ಕೂ ಸಲ್ಲುತ್ತದೆ. ಆದರೆ, ಇಂದಿನ ಸನ್ನಿವೇಶದಲ್ಲಿ ಗಾಂಧಿ ತತ್ವಗಳನ್ನು ದಮನ ಮಾಡುವ ಯತ್ನಗಳು ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದರು.

ವಕೀಲ ಎಸ್.ಶಿವಶಂಕರ್ ಮಾತನಾಡಿದರು. ಹಿರಿಯ ಲೇಖಕ ಡಾ.ಎನ್.ಜಗದೀಶ್ ಕೊಪ್ಪ ಅವರಿಗೆ ಎಸ್.ವಿಶ್ವನಾಥ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕ ಡಿ.ಹೊಸಳ್ಳಿ ಶಿವು, ಜಯಮ್ಮ ವಿಶ್ವನಾಥ್, ಜೆ.ವಿ.ಪೂರ್ಣಿಮಾ, ಸೌಮ್ಯಾ ಶಶಿಧರ್ ಇದ್ದರು.

ವಿದ್ಯಾರ್ಥಿನಿಗೆ ಪ್ರಶಸ್ತಿ ಹಣ: ಪ್ರಶಸ್ತಿ ಸ್ವೀಕರಿಸಿದ ಡಾ.ಎನ್.ಜಗದೀಶ್ ಕೊಪ್ಪ ಮಾತನಾಡಿ, ಪ್ರಶಸ್ತಿಯ ಜತೆ ನೀಡಿದ 5 ಸಾವಿರ ರೂ. ಅನ್ನು ಧಾರವಾಡ ಜಿಲ್ಲೆಯ ಬಡ ವಿದ್ಯಾರ್ಥಿನಿಯ ಓದಿಗೆ ಬಳಸಲಾಗುವುದು ಎಂದು ಪ್ರಕಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net