ಜಾನಪದ ಅಧಿಕೃತ ವಿಷಯವಾಗಿಲಿ: ಪ್ರೊ.ಹಿ.ಚಿ. ಬೋರಲಿಂಗಯ್ಯ ಆಶಯ

mysore
Published on

ಮೈಸೂರು: ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರದಂತೆ ಜಾನಪದವನ್ನೂ ಅಧಿಕೃತ ವಿಷಯವಾಗಿ ವಿಶ್ವವಿದ್ಯಾಲಯಗಳಲ್ಲಿ ಪರಿಗಣನೆ ಮಾಡಿ, ಇದನ್ನು ಕಲಿತ ಪದವೀಧರರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕಿದೆ ಎಂದು ಕರ್ನಾಟಕ ಜಾನಪದ ಪರಿಷತ್(ಜಾನಪದ ಲೋಕ) ಅಧ್ಯಕ್ಷ, ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು.


ಭಾರತ ದರ್ಶಿತ್ವ ಟ್ರಸ್ಟ್, ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಎಂ.ಕನ್ನಿಕಾ ಅವರ ‘ಶಿಕ್ಷಣ ಜಾನಪದ’, ‘ಪಾರಂಪರಿಕ ಜಾನಪದ ಆಚರಣೆಗಳು’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಜಾನಪದ ಅಧ್ಯಯನ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಇದೆ. ಆದರೆ ಇದನ್ನು ಕಲಿತ ವಿದ್ಯಾರ್ಥಿಗಳಿಗೆ ಭವಿಷ್ಯ ಇಲ್ಲದಂತಾಗಿದೆ. ಮೈಸೂರು ವಿವಿಯಲ್ಲಿ ಜಾನಪದ ಕಲಿತ ಅಭ್ಯರ್ಥಿಗಳ ವಯೋಮಿತಿ 50 ವರ್ಷ ದಾಟಿದರೂ ಉದ್ಯೋಗ ದೊರೆತಿಲ್ಲ. ಧಾರವಾಡದ ಕರ್ನಾಟಕ ವಿವಿಯ ವಿದ್ಯಾರ್ಥಿಗಳೂ ಅತಂತ್ರರಾಗಿದ್ದಾರೆ. ಹೀಗಾಗಿ ಜಾನಪದಕ್ಕೂ ಅಧಿಕೃತ ವಿಷಯದ ಮಾನ್ಯತೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.


ಈ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಇತ್ತ ಗಮನ ನೀಡುತ್ತಿಲ್ಲ. ಹಳ್ಳಿಯಿಂದಲೇ ಬಂದಿರುವ ಸಚಿವರು ಸಹ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕಾವ್ಯ, ಗೀತೆಗಳ ವೈಭವೀಕರಣವಷ್ಟೇ ಜಾನಪದ ಅಧ್ಯಯನವಲ್ಲ. ಇದು ಸಮಕಾಲೀನವೂ ಅಲ್ಲ. ಇದರಾಚೆಯೂ ಜಾನಪದ ಕುರಿತು ಅಧ್ಯಯನ ಮಾಡಬೇಕು. ಜಾನಪದ ಮೂಲವಾಗಿರುವ ಹಳ್ಳಿಗಳ ಸ್ಥಿತಿಗತಿ, ಆರ್ಥಿಕವಾಗಿ ನಲುಗಿಹೋಗಿರುವ ರೈತರ ತಲ್ಲಣಗಳ ಕುರಿತು ಅಧ್ಯಯನ ಮಾಡಬೇಕಿದೆ. ಆದರೀಗ ಹಳ್ಳಿಯನ್ನೇ ಮರೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.


ಜಾನಪದ ಕಲೆ ಈಗಲೂ ನಿರ್ಲಕ್ಷೃಕ್ಕೆ ಒಳಗಾಗಿದೆ. ಇದು ಶತಮಾನಗಳಿಂದ ಹೀಗೆ ನಡೆದುಕೊಂಡು ಬಂದಿದೆ. ಶಿಷ್ಟ ಪರಂಪರೆಯಲ್ಲಿ ಬೀದಿಗೋಷ್ಠಿಯಾಗಿರುವ ಜಾನಪದವನ್ನು ನಿಷೇಧಿಸಿದ ಕಾಲವೊಂದು ಇತ್ತು. ಆಧುನಿಕ ಯುಗದಲ್ಲೂ ಇದಕ್ಕೆ ಸಿಗಬೇಕಾದ ಮನ್ನಣೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ವಚನಕಾರರು, ದಾಸರು, ಸೂಫಿಗಳು, ತತ್ವಪದಗಾರರು ಜಾನಪದ ಅಂಶಗಳನ್ನು ಇಟ್ಟುಕೊಂಡು ಸಾಹಿತ್ಯ ಕೃಷಿ ಮಾಡಿ ಗಮನ ಸೆಳೆದರು. ಆದಾಗ್ಯೂ ಅಧ್ಯಯನ ಶಿಸ್ತಿನ ರೂಪದಲ್ಲಿ ಈ ಕಲೆಯನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಿಭಾಗಗಳಿದ್ದರೂ ಜಾನಪದ ಪರಂಪರೆಯ ಆಂತರ್ಯವನ್ನು ಒಳ ಹೊಕ್ಕು ಗಂಭೀರವಾಗಿ ಅಧ್ಯಯನ ಮಾಡಿರುವುದು ಕಡಿಮೆಯೇ ಎಂದರು.


ಜಾನಪದ ಕೇವಲ ಸಾಹಿತ್ಯ, ಮನರಂಜನೆಯಷ್ಟೇ ಅಲ್ಲ. ಅದರ ಒಳ ಹೊಕ್ಕು ನೋಡಬೇಕಿದೆ. ಈ ಮೂಲಕ ಹೊಸ ಜಾನಪದ ಚರಿತ್ರೆ ಕಟ್ಟುವ ಕೆಲಸವಾಗಬೇಕು ಎಂದರು.


ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಮುಖ್ಯಸ್ಥೆ ಪ್ರೊ.ಎಚ್.ಆರ್.ಚೇತನಾ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಶಿವಪ್ರಸಾದ್, ಯುವ ಕವಿ ಆಲಗೂಡು ಲಿಂಗರಾಜ್, ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಲೇಖಕಿ ಡಾ.ಎಂ.ಕನ್ನಿಕಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net