ಜಾಕ್ವೆಲ್ ಕಾಮಗಾರಿ ಮುಗಿಸಿ ನೀರು ಹರಿಸಲಿ

ಚನ್ನರಾಯಪಟ್ಟಣದ ಅಮಾನಿಕೆರೆಗೆ ನಿರ್ಮಿಸಲಾಗಿರುವ ತೋಟಿ ಏತನೀರಾವರಿ ಯೋಜನೆಯ ಜಾಕ್ವೆಲ್ ಕಾಮಗಾರಿ ಸ್ಥಳಕ್ಕೆ ಗುರುವಾರ ಶಾಸಕ ಸಿ.ಎನ್.ಬಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ದೀಪಕ್, ಎಚ್.ಜಿ.ರಾಮಕೃಷ್ಣ, ತೋಟಿ ನಾಗರಾಜು, ವಾಸು, ಹುಲಿಕೆರೆ ಸಂಪತ್ತು, ವಿ.ಎನ್.ಮಂಜುನಾಥ್ ಮತ್ತಿತರರಿದ್ದರು.
ಚನ್ನರಾಯಪಟ್ಟಣದ ಅಮಾನಿಕೆರೆಗೆ ನಿರ್ಮಿಸಲಾಗಿರುವ ತೋಟಿ ಏತನೀರಾವರಿ ಯೋಜನೆಯ ಜಾಕ್ವೆಲ್ ಕಾಮಗಾರಿ ಸ್ಥಳಕ್ಕೆ ಗುರುವಾರ ಶಾಸಕ ಸಿ.ಎನ್.ಬಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ದೀಪಕ್, ಎಚ್.ಜಿ.ರಾಮಕೃಷ್ಣ, ತೋಟಿ ನಾಗರಾಜು, ವಾಸು, ಹುಲಿಕೆರೆ ಸಂಪತ್ತು, ವಿ.ಎನ್.ಮಂಜುನಾಥ್ ಮತ್ತಿತರರಿದ್ದರು.
Published on

ಚನ್ನರಾಯಪಟ್ಟಣ: ತಾಲೂಕಿನ ತೋಟಿ ಏತನೀರಾವರಿ ಯೋಜನೆಯಲ್ಲಿ ಬಾಕಿಯಿರುವ ಶೇ.15ರಷ್ಟು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.

ತೋಟಿ ಏತ ನೀರಾವರಿ ಯೋಜನೆಯ ಜಾಕ್ವೆಲ್‌ಗೆ ಗುರುವಾರ ಭೇಟಿ ನೀಡಿ ನೀರಾವರಿ ಅಧಿಕಾರಿಗಳೊಂದಿಗೆ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಜಾಕ್ವೆಲ್ ಕಾಮಗಾರಿ, 900 ಮೀ. ಪೈಪ್‌ಲೇನ್ ನಿರ್ಮಾಣ ಸೇರಿದಂತೆ ಶೇ.15ರಷ್ಟು ಕಾಮಗಾರಿ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದು, ಗುತ್ತಿಗೆದಾರರು ಸಂಪರ್ಕಕ್ಕೂ ಸಿಗುತ್ತಿಲ್ಲ. ನೀರಾವರಿ ಸಚಿವರು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಬೇರೊಬ್ಬರನ್ನು ನೇಮಿಸಿ ಶೀಘ್ರ ಕಾಮಗಾರಿ ಮುಗಿಸಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಅಮಾನಿಕೆರೆಯಿಂದ ನೀರೆತ್ತಿ ನುಗ್ಗೇಹಳ್ಳಿ ಹೋಬಳಿಯ ತೋಟಿ ಕೆರೆ ಸೇರಿದಂತೆ ತಾಲೂಕಿನ 25 ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆ ಇದಾಗಿದೆ. ಪಟ್ಟಣದ ಅಮಾನಿಕೆರೆ ಬಳಿ ಬೃಹತ್ ಮೋಟಾರ್ ಅಳವಡಿಕೆ ಸೇರಿ ಜಾಕ್ವೆಲ್ ಕಾಮಗಾರಿ ಮುಗಿದಿದೆ. ಇಲ್ಲಿಗೆ ವಿದ್ಯುತ್ ಸಂಪರ್ಕ, ಯೋಜನೆಯಡಿ 900 ಮೀ. ಪೈಪ್‌ಲೇನ್ ಅಳವಡಿಕೆ ಮತ್ತು ಉಪಕಾಲುವೆಗಳ ನಿರ್ಮಾಣ ಬಾಕಿಯಿದೆಯಷ್ಟೇ. ಗುತ್ತಿಗೆ ಪಡೆದಿರುವ ಕಂಪನಿ ಕಳೆದೊಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಳಿಸಿದೆ. ಈ ಕುರಿತು ತಾವೇ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಉಪಯೋಗವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ಆಗಸ್ಟ್-ಸೆಪ್ಟಂಬರ್‌ನಲ್ಲಿ ನೀರೆತ್ತುವ ಭರವಸೆಯನ್ನು ರೈತರಿಗೆ ನೀಡಿದ್ದೇವೆ. ಕಾಮಗಾರಿ ಆರಂಭಿಸುವಂತೆ ಒತ್ತಾಯ ಹಾಕಲು ಬೆಂಗಳೂರಿನ ನೀರಾವರಿ ನಿಗಮದ ಕಚೇರಿಗೆ 20ಕ್ಕೂ ಹೆಚ್ಚು ಬಾರಿ ಹೋಗಿದ್ದೇನೆ. ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ಸಾಕಷ್ಟು ಬಾರಿ ತಂದಿದ್ದರೂ ಪ್ರಯೋಜನವಾಗಿಲ್ಲ, ಈ ಬಗ್ಗೆ ನೀರಾವರಿ ಸಚಿವರೇ ಖುದ್ದು ಕ್ರಮಕ್ಕೆ ಮುಂದಾಗಬೇಕು.ಈ ಸಂಬಂಧ ಮತ್ತೊಮ್ಮೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡುವೆ ಎಂದರು.

ನೀರಾವರಿ ನಿಗಮದ ಇಂಜಿನಿಯರ್ ದೀಪಕ್ ಮಾತನಾಡಿ, ಸಂಬಂಧಿಸಿದ ಗುತ್ತಿಗೆದಾರರಿಗೆ ಇಲಾಖೆಯಿಂದ 20ಕ್ಕೂ ಹೆಚ್ಚು ನೋಟಿಸ್ ನೀಡಲಾಗಿದೆ. ಪ್ರತಿ ನೋಟಿಸ್‌ಗೂ ಮುಂದಿನ 20 ದಿನದೊಳಗೆ ಪ್ರಾರಂಭಿಸುವುದಾಗಿ ಉತ್ತರ ಬರುತ್ತದೆ. ಆದರೆ ಕಾಮಗಾರಿ ಆರಂಭಿಸುತ್ತಿಲ್ಲ. ಜಾಕ್ವೇಲ್‌ನಲ್ಲಿ 4 ಮೋಟಾರ್ ಅಳವಡಿಕೆಯಾಗಿದೆ. ಟ್ರಾನ್ಸ್‌ಫಾರ್ಮರ್ ಸೇರಿ ವಿದ್ಯುತ್ ಕಲ್ಪಿಸಲು ಅಗತ್ಯ ಪರಿಕರಗಳು ಪೂರೈಕೆಯಾಗಿವೆ. ವಿದ್ಯುತ್ ಲೇನ್ ಅಳವಡಿಕೆ ಸೇರಿ ಸಣ್ಣಪುಟ್ಟ ಕಾಮಗಾರಿಯಷ್ಟೆ ಬಾಕಿಯಿವೆ. ಯೋಜನೆಯ ಗಾತ್ರ 64 ಕೋಟಿಯದ್ದಾಗಿದ್ದು, ಈಗಾಗಲೇ ಗುತ್ತಿಗೆದಾರನಿಗೆ 43 ಕೋಟಿ ರೂ. ಹಣ ಸಂದಾಯವಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಮುಖಂಡರಾದ ಎಚ್.ಜಿ.ರಾಮಕೃಷ್ಣ, ತೋಟಿ ನಾಗರಾಜು, ವಾಸು, ಹುಲಿಕೆರೆ ಸಂಪತ್ತು, ವಿ.ಎನ್.ಮಂಜುನಾಥ್, ನೀರಾವರಿ ನಿಗಮದ ಅಧಿಕಾರಿಗಳು ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net