ರೈತರು ಖಾದ್ಯ ತೈಲ ಉತ್ಪಾದಿಸಲಿ

BIRUR raitha
ಹುಲ್ಲೇಹಳ್ಳಿ ಗ್ರಾಪಂನಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಮತ್ತು ಎಣ್ಣೆಕಾಳು ಯೋಜನೆ ಹಾಗೂ ರೈತರಿಗೆ ತರಬೇತಿ ಕಾರ್ಯಗಾರವನ್ನು ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್ ಉದ್ಘಾಟಿಸಿದರು. ಉಷಾ, ವಿನುತಾ, ಸೋಮನಿಂಗಪ್ಪ, ಮಹಾಲಿಂಗಪ್ಪ, ರಾಮಪ್ಪ ಇತರರಿದ್ದರು.
Published on

ಬೀರೂರು: ದೇಶದಲ್ಲಿ ಖಾದ್ಯ ತೈಲ ಉತ್ಪಾದನೆ ಮಟ್ಟ ಕುಂಠಿತವಾಗಿರುವ ಪರಿಣಾಮ ತೈಲ ಬೆಲೆ ಹೆಚ್ಚಾಗಿದೆ. ರೈತರು ಸ್ವಾವಂಬಿಗಳಾಗಿ ತೈಲ ಉತ್ಪಾದಿಸಿದರೆ ಬೆಲೆ ಇಳಿಕೆಯಾಗಲಿದೆ ಎಂದು ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣ್ ಹೇಳಿದರು.

ಹುಲ್ಲೇಹಳ್ಳಿ ಗ್ರಾಪಂನಲ್ಲಿ ಮಂಗಳವಾರ ಜಿಲ್ಲಾ ಕೃಷಿ ಸಂಶೋಧಣಾ ಕೇಂದ್ರ ಮತ್ತು ತಾಲೂಕು ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಮತ್ತು ಎಣ್ಣೆಕಾಳು ಯೋಜನೆ ಹಾಗೂ ರೈತರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತ ಶೇ.57 ಖಾದ್ಯ ತೈಲ ಆಮದು ಮಾಡಿಕೊಳ್ಳುವುದರೊಂದಿಗೆ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ. ತೈಲವನ್ನು ಆಮದು ಮಾಡಿಕೊಳ್ಳದೆ ದೇಶದ ರೈತರೇ ಉತ್ಪಾದಿಸಿದರೆ ಇದರ ದರ ಕಡಿಮೆ ಮಾಡುವ ಆಲೋಚನೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಜನೆ ಜಾರಿಗೆ ತಂದಿದ್ದಾರೆ. ಗ್ರಾಮೀಣ ಭಾಗದ ರೈತರು ಸ್ವಾವಲಂಬಿಗಳಾದಾಗ ಮಾತ್ರ ಬೆಲೆ ಕಡಿಮೆ ಮಾಡಬಹುದು. ಇದಕ್ಕಾಗಿಯೇ ಕೇಂದ್ರ ಸರ್ಕಾರ ರೈತರಿಗಾಗಿಯೇ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ರಾಮಚಂದ್ರಪ್ಪ ಅವರು ಎಣ್ಣೆಕಾಳುಗಳಲ್ಲಿ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ಕೀಟ ನಿರ್ವಹಣೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ನಟರಾಜ್ ಅವರು ಮಳೆಗಾಲದಲ್ಲಿ ಬದು ನಿರ್ಮಾಣ ಮತ್ತು ಮಳೆ ನೀರು ಕೊಯ್ಲು ಮಾಹಿತಿ, ಅಡಕೆ ಬೆಳೆಯಲ್ಲಿ ಲಘು ಪೋಷಕಾಂಶ ಮಿಶ್ರ ಅಳವಡಿಕೆ ಹಾಗೂ ನೀರಿನ ನಿರ್ವಹಣೆ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ರುದ್ರಪ್ಪ ಮಾತನಾಡಿ, ಕೃಷಿ ಇಲಾಖೆಯಿಂದ ತರಬೇತಿ ಪಡೆದು ವ್ಯವಸಾಯದಲ್ಲಿ ಅಳವಡಿಸಿಕೊಳ್ಳಬೇಕು. ಕೃಷಿ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಸಲಹೆ, ಸಹಕಾರ ಪಡೆದು ಬೆಳೆಗಳನ್ನು ಬೆಳೆದು ಆರ್ಥಿಕ ಸಬಲರಾಗಬೇಕು ಎಂದರು.
ಲಿಂಗದಹಳ್ಳಿ ಸಹಾಯಕ ಕೃಷಿ ನಿರ್ದೇಶಕಿ ಉಷಾ, ಕೃಷಿ ಅಧಿಕಾರಿಗಳಾದ ವಿನುತಾ, ಸೋಮನಿಂಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮೂರ್ತಿ, ಗ್ರಾಮಸ್ಥರಾದ ಮಹಾಲಿಂಗಪ್ಪ, ರಾಮಪ್ಪ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net