ರೈತರು ಎಣ್ಣೆಕಾಳು ಬೇಸಾಯ ಮಾಡಲಿ

10 Jaggu 2
Published on

ಬೆಳಗಾವಿ: ಜಿಲ್ಲೆಯಲ್ಲಿ ಎಣ್ಣೆಕಾಳು ಬೇಸಾಯಕ್ಕೆ ಪೂರಕ ವಾತಾವರಣವಿದ್ದು, ರೈತರು ಹೆಚ್ಚು ಖಾದ್ಯ ತೈಲ ಬೆಳೆಗಳ ಬೇಸಾಯಕ್ಕೆ ಆದ್ಯತೆ ನೀಡಬೇಕು ಎಂದು ಮತ್ತಿಕೊಪ್ಪದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಹಾಗೂ ರೈತ ಕಲ್ಯಾಣ ಅಭಿವೃದ್ಧಿ ಇಲಾಖೆ, ಭಾರತ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಧಾರವಾಡದ ರಾಷ್ಟ್ರೀಯ ಬೀಜ ನಿಗಮ ನಿಯಮಿತ ಹಾಗೂ ಐಸಿಎಆರ್​ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ರೈತರಿಗೆ ಏರ್ಪಡಿಸಿದ್ದ ಎಣ್ಣೆಕಾಳು ಬೆಳೆಗಳ ಸಮಗ್ರ ಬೆಳೆ ನಿರ್ವಹಣೆ ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2025&26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 60:40ರ ಅನುದಾನ ಹಂಚಿಕೆ ಅನುಪಾತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಖಾದ್ಯ ತೈಲ ಆಮದು ಕಡಿಮೆ ಮಾಡಲು ಮತ್ತು ದೇಶೀಯ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸಲು ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಶಿಬಿರದಲ್ಲಿ ನವೀನ ತಂತ್ರಜ್ಞಾನ ಅಳವಡಿಕೆ, ಬೆಳೆಗಳ ಗುಚ್ಛ ಪ್ರಾತ್ಯಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು. ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಪ್ರಗತಿಪರ ರೈತ ಕಲ್ಲಪ್ಪ ಯಲ್ಲಡಗಿ ಅನುಭವ ಹಂಚಿಕೊಂಡರು. ರೈತರೊಂದಿಗೆ ಕೀಟ ನಿರ್ವಹಣೆ ಕುರಿತು ಡಾ.ಪಿ.ಎಸ್​.ಹೂಗಾರ ಸಂವಾದ ನಡೆಸಿದರು. ಬೇಸಾಯ ಶಾಸ ಜಿ.ಬಿ.ವಿಶ್ವನಾಥ, ಮಣ್ಣು ವಿಜ್ಞಾನಿ ಎಸ್​.ಎಂ.ವಾರದ ಮಾತನಾಡಿದರು. ಕೇಂದ್ರದ ವಿಜ್ಞಾನಿ ಡಾ.ಎಸ್​.ಎಸ್​. ಹಿರೇಮಠ, ಪ್ರವಿಣ ಯಡಹಳ್ಳಿ, ಶಂಕರಗೌಡ ಪಾಟೀಲ ಹಾಗೂ ರೈತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net