

ಹೊಳೆಆಲೂರ: ಮನುಕುಲ ಉಳಿಯಬೇಕಾದರೆ ರೈತ ಸಮುದಾಯ ಕೃಷಿಯನ್ನು ಕೇವಲ ಆಹಾರ ಉತ್ಪಾದನೆ ವಿಧಾನ ಎಂದು ನೋಡಬಾರದು. ಜೀವ ವೈವಿಧ್ಯ ಸಂರಕ್ಷಣೆ, ಪರಿಸರದಲ್ಲಿನ ಸಸ್ಯ ಹಾಗೂ ಪ್ರಾಣಿಗಳ ಉತ್ಪಾದನೆಯಲ್ಲಿ ಸಾಂಸ್ಕೃತಿಕ ಕ್ರಮಗಳ ಅಳವಡಿಕೆ, ಕೀಟ ನಿಯಂತ್ರಿಸಲು ನೈಸರ್ಗಿಕ ವಿಧಾನ ಬಳಸಬೇಕು. ಆರೋಗ್ಯಕರ ಉತ್ಪನ್ನಗಳನ್ನು ಉತ್ಪಾದಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.
ಗ್ರಾಮದ ವೀರಭದ್ರೇಶ್ವರ ಸೇವಾ ಸಮಿತಿಯ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಜರುಗಿದ ಕೃಷಿಯಲ್ಲಿ ಧರ್ಮದ ಪಾತ್ರ ವಿಚಾರ ಸಂಕಿರಣದ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು. ಅತಿಯಾದ ರಸಗೊಬ್ಬರ ಹಾಗೂ ಹಾನಿಕಾರಕ ರಾಸಾಯನಿಕ ಕ್ರಿಮಿನಾಶಕಗಳ ಬಳಕೆ ಮಾಡದೆ ಸಾವಯವ ಕೃಷಿ ತಂತ್ರ ಅಳವಡಿಸಿಕೊಳ್ಳುವತ್ತ ರೈತರು ಸಂಕಲ್ಪ ಮಾಡಬೇಕು. ಮನುಷ್ಯ ಆರೋಗ್ಯಪೂರ್ಣ ಜೀವನ ನಡೆಸಲು ಅಧ್ಯಾತ್ಮದೊಂದಿಗೆ ಸರಿಯಾದ ಆಹಾರ ಪದ್ದತಿ ಪಾಲಿಸಬೇಕು. 108 ರೋಗ ನಿವಾರಣಾ ಶಕ್ತಿ ಹೂಂದಿರುವ ಪವಿತ್ರ ಗೋ ಸಂಪತ್ತು ಸಂರಕ್ಷಿಸುವ ಕೆಲಸವಾಗಬೇಕು ಎಂದರು.
ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿ ನಿರ್ದೇಶಕ ಮಹೇಶಪ್ಪ ಐವಳ್ಳಿ ಮಾತನಾಡಿ, ಸಮಾಜಮುಖಿ ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ವೀರಭದ್ರೇಶ್ವರ ದೇವಸ್ಥಾನಕ್ಕೆ ಭೂದಾನ ಮಾಡಿದ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಸೂಟಿಯ ರೇವಣಸಿದ್ಧೇಶ್ವರ ಸ್ವಾಮಿಗಳು, ಬೆನಹಾಳ ಸದಾಶಿವ ಮಹಾಂತ ಶಿವಾಚಾರ್ಯರು, ಗಂಗಾಧರ ಸ್ವಾಮಿಗಳು, ಶಿರೋಳ ಶ್ರೀ ಮಠದ ಅಕ್ಕಮಹಾದೇವಿ ತಾಯಿಯವರು ಸಾನ್ನಿಧ್ಯ ವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತಗೌಡ ಪಾಟೀಲ, ಕಾರ್ಯದರ್ಶಿ ಕಲ್ಮೇಶ್ವರ ಸಾಸಳ್ಳಿ, ವೈ.ಎಸ್. ಬೇಲಿ, ಬಿ.ಸಿ. ಪಾಟೀಲ, ಮಹಾಂತೇಶ ಬ್ಯಾಡಗಿ, ಗಣೇಶಪ್ಪ ಕಂಬಿ, ದುರದುಂಡೇಶ್ವರ ಶಲ್ಲಿಕೇರಿ, ಬಸವರಾಜ ಸಾಸಳ್ಳಿ, ಮುತ್ತಣ್ಣ ತೇಜಿಗೌಡರ, ಇತರರಿದ್ದರು.