

ಜಮಖಂಡಿ: ಇಂದು ಹೆಚ್ಚಿನ ರೈತರು ಪಾರಂಪರಿಕ ಕೃಷಿಯ ಮೂಲ ತತ್ವ ಹಾಗೂ ತಳಹದಿ ಮರೆತು ಯಥೇಚ್ಚವಾಗಿ ರಾಸಾಯನಿಕಗಳ ಬಳಕೆ ಮಾಡುತ್ತಿರುವುದರಿಂದ ಸುಸ್ಥಿರ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಮುಂದಿನ ಪೀಳಿಗೆಗೆ ಲವತ್ತಾದ ಜಮೀನು, ಋತುಮಾನಕ್ಕೆ ತಕ್ಕಂತೆ ಸಾವಯವ ಕೃಷಿಗೆ ಒಗ್ಗುವ ತಳಿ ಪರಿಚಯಿಸುವ ಅಗತ್ಯವಿದೆ ಎಂದು ಮಹಾಲಿಂಗಪುರ ರೋಹಿಣಿ ಬಯೋಟೆಕ್ ಸಂಸ್ಥೆ ಸಂಸ್ಥಾಪಕ ಡಾ. ಮಲ್ಲಪ್ಪ ಕಟ್ಟಿ ಹೇಳಿದರು.
ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಕೃಷಿ ಇಲಾಖೆ, ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಿತಿ, ಸಹಯೋಗದಲ್ಲಿ ಆತ್ಮಯೋಜನೆಯಡಿ ಶನಿವಾರ ನಡೆದ ಸಾವಯವ ಕೃಷಿ ಪದ್ಧತಿಗಳ ಕುರಿತು ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಯವ ಕೃಷಿ ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ಬೇಕಾಗುವಂತಹ ಘಟಕಗಳನ್ನು ಅಳವಡಿಸಿಕೊಂಡು ಪಾರಂಪರಿಕ ಕೃಷಿ ಕೈಗೊಳ್ಳಬೇಕಿದೆ. ಬೆಳೆಗಳಲ್ಲಿನ ಕಳೆಗಳ ನಿಯಂತ್ರಣಕ್ಕೆ ಕಳೆನಾಶಕ ಬದಲು ಎಡೆಕುಂಟೆ ಹೊಡೆದಲ್ಲಿ ಮಣ್ಣಿನಲ್ಲಿರುವ ಸಾರಜನಕ ಅಂಶವು ಬಿಡುಗಡೆಗೊಂಡು ಬೆಳೆಗಳಿಗೆ ಸಿಗುತ್ತದೆ ಎಂದರು.
ಶ್ರೀಮಠದ ಗುರುಪಾದೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೀಕರ ಬರ ಪರಿಸ್ಥಿತಿಯಲ್ಲೂ ಸಾವಯವ ಕೃಷಿ ಪದ್ಧತಿ ಅನುಸರಿಸಿ ರೈತ ಯಾವುದೇ ಸಮಸ್ಯೆಯಿಲ್ಲದೆ ಕೃಷಿ ಮುಂದುವರಿಸಿದ್ದಾನೆ. ಹೆಚ್ಚಿನ ರೈತರು ರಾಸಾಯನಿಕಗಳ ಬಳಕೆ ಮಾಡುತ್ತಿದ್ದು, ಇದರಿಂದ ಭೂಮಿ ತನ್ನ ಸತ್ವ ಕಳೆದುಕೊಂಡು ಬಂಜರು ಆಗುತ್ತಿದೆ. ಅಲ್ಲದೇ ಮನುಷ್ಯನ ಆರೋಗ್ಯವೂ ಹದಗೆಡುತ್ತಿದೆ. ನಮ್ಮ ಹೊಲದಲ್ಲಿಯೇ ಸಿಗುವ ಗಂಜಲು ಮತ್ತು ಸೆಗಣಿ ಉಪಯೋಗಿಸಿ ಸಾವಯವ ಮೂಲದಿಂದ ಸಸ್ಯಜನ್ಯ ದ್ರಾವಣಗಳನ್ನು ರೈತರು ಸ್ವತಃ ತಯಾರಿಸಿಕೊಂಡು ಕೀಟ ನಿರ್ವಹಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಮೂಡಲಗಿ ಪ್ರಗತಿಪರ ಕೃಷಿಕ ಬಾಳಪ್ಪ ಬೆಳಕೂಡ ಮಾತನಾಡಿ, ಕಬ್ಬು ಬೆಳೆಯ ಜತೆಗೆ ಇತರೆ ಬೆಳೆಗಳಾದ ಸೋಯಾ, ಅವರೆ, ಉದ್ದು, ಹೆಸರು, ಕಡಲೆ ಬೆಳೆ ಬೆಳೆಯಬೇಕು. ಇದರಿಂದ ಬೆಳೆ ಪರಿವರ್ತನೆ ಆಗುತ್ತದೆ. ಹಸಿರೆಲೆ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಾಗಬೇಕು. ಇದರಿಂದ ಮಣ್ಣಿನ ಲವತ್ತತೆ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮುಧೋಳ ತಾಲೂಕಿನ ಬರಗಿ ಗ್ರಾಮದ ಕೃಷಿಕ ಪ್ರಶಾಂತ ನಾಯಕ, ಗೋಕಾಕ ತಾಲೂಕಿನ ಸುನಧೋಳಿಯ ರೈತ ಮಹಿಳೆ ಹಾಗೂ ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಪ್ರೇಮಾ ಗಾಣಿಗೇರ ಮಾತನಾಡಿದರು. ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಅಡಿವೆಪ್ಪ ಬೂದಿ, ಸವಿತಾ ನಾಗರಡ್ಡಿ, ಸಂದೀಪಗೌಡ ಪಾಟೀಲ ಹಾಗೂ ಹಣಮಂತ ಬುಗಟಿ, ರಾವುತ್ ದರ್ಗಾ, ಉದಯಕುಮಾರ ಬಾಪುರೆ, ಪುಷ್ಪಾ ಕಾಟಗಲ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಹಣಮಂತ ಗುಡಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ನಾವಿ, ಕೃಷಿಕ ಅಂದಪ್ಪ ಕೋಳೂರ, ಕೃಷಿ ಅಧಿಕಾರಿ ರವೀಂದ್ರ ತುಳಸಿಗೇರಿ ಇದ್ದರು.
ಆತ್ಮಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಕೆ.ಎ. ಜಮಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗನಗೌಡ ಪಾಟೀಲ ನಿರೂಪಿಸಿದರು.