

ಕಡೂರು: ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸಿಕೊಡುವ ರೈತ ಬಜಾರ್ ರಾಜ್ಯಾದ್ಯಂತ ಸಹಕಾರ ಸಂಘಗಳ ಮೂಲಕ ಸ್ಥಾಪಿತವಾದರೆ ದೇಸಿ ಉತ್ಪನ್ನಗಳಿಗೆ ಉತ್ತಮ ಬೆಲೆ ಲಭಿಸಲಿದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಸೋನಾಲ್‌ಗೌಡ ಹೇಳಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಪ್ರಗತಿ ರೈತ ಉತ್ಪಾದಕರ ಕಂಪನಿಯಿಂದ ತಾಲೂಕಿನ ಪ್ರತಿಭಾನ್ವಿತ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ರಿಯಾಯಿತಿ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು.
ರೈತ ಬಜಾರ್ ಪ್ರಥಮವಾಗಿ ಕಡೂರು ಪಟ್ಟಣದಲ್ಲಿ ಆರಂಭವಾಗಿದ್ದು, ಸಾವಯವ ಕೃಷಿಗೆ ಉತ್ತೇಜನ ಮತ್ತು ಸಾವಯವ ಆಹಾರ ಪದಾರ್ಥಗಳಿಗೆ ಮರುಕಟ್ಟೆ ಕಲ್ಪಿಸಿ ಸಹಕಾರ ಸಂಘಗಳಿಗೆ, ರೈತರಿಗೆ ಉತ್ತಮ ಬೆಲೆ ನೀಡಿ ಖರೀದಿದಾರರಿಗೂ ಶೇ.5ರ ರಿಯಾಯಿತಿಯಲ್ಲಿ ಮಾರಾಟ ಮಡುತ್ತಿರುವ ರೈತ ಬಜಾರ್‌ನ ಕಾರ್ಯ ಶ್ಲಾನೀಯ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್ ಮಾತನಾಡಿ, ಪ್ರತಿಯೊಬ್ಬ ರೈತನು ರೈತ ಬಜಾರಿನ ಸದಸ್ಯತ್ವ ಪಡೆದು ದೇಸಿ ಪದಾರ್ಥಗಳನ್ನು ಉತ್ತಮ ಬೆಲೆಗೆ ನೀಡಿ ರೈತ ಬಜಾರನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಸಹಕರಿಸಬೇಕು. ರೈತ ಬಜಾರ್‌ನಲ್ಲಿ ರೈತರಿಗೆ ನಿಖರ ಬೆಲೆ ಸಿಗುವುದರಿಂದ ನಮ್ಮ ಕೃಷಿಯನ್ನು ಸರ್ಕಾರಗಳು ಕೈಗಾರಿಕೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.