

ಚಿಕ್ಕೋಡಿ: ರೈತರು ಸಮಸ್ಯೆಗಳನ್ನು ಮೆಟ್ಟಿ ನಿಂತು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಕೃಷಿ ಉಪನಿರ್ದೇಶಕ ಎಚ್.ಡಿ. ಕೋಳೆಕರ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ, ಕಾರ್ಮಿಕ, ಯೋಧ ಮತ್ತು ಪತ್ರಕರ್ತ ಕುರಿತಾದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿ, ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಸರ್ಕಾರ ಜಾರಿಗೊಳಿಸಿರುವ ಅನೇಕ ಯೋಜನೆಗಳನ್ನು ಕೃಷಿ ಮತ್ತು ತೋಟಗಾರಿಕೆೆ ಇಲಾಖಾಕಾರಿಗಳು ರೈತರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಯೋಜನೆಗಳ ಲಾಭ ಪಡೆದುಕೊಂಡು ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಉಪವಿಭಾಗಾಕಾರಿ ಮಾಧವ ಗಿತ್ತೆ ಮಾತನಾಡಿ, ರೈತರ ಸಮಸ್ಯೆಗಳು ಸ್ಥಳೀಯವಾಗಿಯೇ ಬಗೆಹರಿಸಲು ಅಕಾರಿಗಳು ಮುಂದಾಗಬೇಕು ಎಂದರು.
ರೈತ ಮುಖಂಡ ರುದ್ರಪ್ಪ ಸಂಗಪ್ಪಗೋಳ ಮಾತನಾಡಿ, ಬೆಳೆಗೆ ವೈಜ್ಞಾನಿಕ ಬೆಲೆ, ನೀರಾವರಿ ಸೌಲಭ್ಯ, ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು.
ಚಿತ್ರಕಲಾವಿದ ಬಾಬುರಾವ ನಡೋಣಿ ಮಾತನಾಡಿದರು. ಪತ್ರಕರ್ತ ಚಂದ್ರಶೇಖರ ಚಿಣಕೆಕರ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ, ಕಾರ್ಮಿಕ ನಿರೀಕ್ಷಕ ಸಂಜೀವ ಭೋಸಲೆ, ಅಪ್ಪಾಸಾಹೇಬ ಕುರಣೆ, ಮಹಾಲಿಂಗ ಗುಗ್ಗರೊ, ತ್ಯಾಗರಾಜ ಕದಂ ಇತರರಿದ್ದರು.