

ಢವಳಗಿ: ರೈತರು ರಸಾಯನಿಕ ಗೊಬ್ಬರ ಮಿತವಾಗಿ ಬಳಸಬೇಕು. ಸಾವಯವ ಕೃಷಿಯತ್ತ ಗಮನ ಹರಿಸಬೇಕೆಂದು ಕೃಷಿ ವಿಜ್ಞಾನಿ ಡಾ. ಶಿವರಾಜ ಕಾಂಬಳೆ ಹೇಳಿದರು.
ಹಳ್ಳೂರು ಮತ್ತು ಗುಡಿಹಾಳ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಅವರು ಮಾತನಾಡಿದರು.
ಹಿರಿಯ ವಿಜ್ಞಾನಿ ಡಾ. ಎಸ್.ಎಂ. ವಸದ ಮಾತನಾಡಿ, ಈಗಾಗಲೇ ಅಭಿಯಾನ ಆರಂಭವಾಗಿದ್ದು, ಜು. 12ರ ವರೆಗೆ ನಡೆಯಲಿದೆ. ಈ ಅಭಿಯಾನದಲ್ಲಿ ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ. ಗುಣಮಟ್ಟದ ಬೀಜ ಬಿತ್ತನೆ ಮಾಡಬೇಕು. ಸಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗೋವಿಂದ ರೆಡ್ಡಿ ಮೆದಕಿನಾಳ ಮಾತನಾಡಿ, ಸಾವಯವ ಕೃಷಿಯತ್ತ ಹೆಚ್ಚಿನ ಗಮನಹರಿಸಬೇಕು. ಜೀವಾಮೃತ, ಬೀಜಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರ ಬಳಕೆ, ಮಣ್ಣು ಪರೀಕ್ಷೆ, ಪರಿಸರ ಸ್ನೇಹಿ ರೋಗ ಮತ್ತು ಕೀಟ ನಿರ್ವಹಣೆ, ಬೀಜೋಪಚಾರದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಸಂಗಮೇಶ ಸಜ್ಜನ, ಸಂಗನೌಡ ರೆಬನಳ್ಳಿ, ಸಂಗಮೇಶ ಚೌದ್ರಿ, ಶೇಖಪ್ಪ ಭಜಂತ್ರಿ, ಶರಣು ಪಾಟೀಲ, ನಾಗರಾಜ ಹಳಬರ ಹಾಗೂ ರೈತರು ಪಾಲ್ಗೊಂಡಿದ್ದರು.