ಜೀವನ ಪಕ್ವತೆಗೆ ಅನುಭವ ಪ್ರೇರಣೆಯಾಗಲಿ

3 GKN
Published on

ಗೋಕರ್ಣ: ಹಿರಿಯರ ಅನುಭವ ಬದುಕಿನ ಎಷ್ಟೋ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಹಿರಿಯರ ಶ್ರೇಷ್ಠವಾದ ಅನುಭವ ಪಾಠ ಜೀವನ ಪಕ್ವತೆಯನ್ನು ಉಂಟುಮಾಡಿ ನಮಗೆ ಅಗತ್ಯ ಪ್ರೇರಣೆಯನ್ನೊದಗಿಸುತ್ತದೆ ಎಂದು ಸಂಘಟನಾ ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಭಾನುವಾರದ ಸಂದೇಶದಲ್ಲಿ ತಿಳಿಸಿದರು.

ನಮ್ಮ ವ್ಯಕ್ತಿತ್ವ ಮತ್ತು ಬುದ್ಧಿಮತ್ತೆ ಬೆಳೆಯಲು ಹಿರಿಯರ ಅನುಭವ ಪ್ರಯೋಜನಕ್ಕೆ ಬರುತ್ತದೆ. ಇದಕ್ಕೆ ಉದಾಹರಣೆ ರಾಮಾಯಣದಲ್ಲಿನ ಜಾಂಬವಂತನಾಗಿದ್ದಾನೆ. ಇಡೀ ರಾಮಾಯಣದಲ್ಲಿ ಅತ್ಯಂತ ಹಿರಿಯನಾದ ಜಾಂಬವಂತ ರಾಮಾಯಣದ ಸೂತ್ರವಾಗಿ ನಿಲ್ಲುತ್ತಾನೆ. ಸೀತಾನ್ವೇಷಣೆ ಸಮಯದಲ್ಲಿ 100 ಯೋಜನದ ಸಮುದ್ರ ಹಾರುವ ವೀರನ ಹುಡುಕಾಟ ನಡೆದಾಗ ಆಂಜನೇಯನಿಗೆ ಆತನ ಅಗಾಧ ಶಕ್ತಿಯ ಅರಿವು ತಿಳಿಸಿ, ಸ್ಫೂರ್ತಿ ತುಂಬಿ ಸಮುದ್ರ ಲಂಘನಕ್ಕೆ ಪ್ರೇರಣೆಯಾದವ ಜಾಂಬವಂತ. ಇದೇ ರೀತಿ ರಾಮ ಲಕ್ಷ್ಮಣರು ಘಾಸಿಗೊಂಡು ಬಸವಳಿದ ಸ್ಥಿತಿಯಲ್ಲಿದ್ದಾಗ ಸಂಜೀವಿನಿ ಗುರುತು ವಿವರಿಸಿ ಅದನ್ನು ತರಲು ಕಾರಣೀಕರ್ತನಾದವನು ಹಿರಿಯನಾದ ಜಾಂಬವಂತನಾಗಿದ್ದಾನೆ. ರಾಮಾಯಣ ಎನ್ನುವುದು ಕೇವಲ ಪುರಾಣ ಕಾವ್ಯವಲ್ಲ. ಜಾಂಬವಂತನಂತಹ ಅನೇಕ ಹಿರಿಯ ಆದರ್ಶಗಳು ರಾಮಾಯಣ ದಲ್ಲಿವೆ. ರಾಮ, ಲಕ್ಷ್ಮಣ, ಭರತ, ಶತ್ರುಘ್ನನಂತಹ ಆದರ್ಶ ಪುರುಷರಂತೆ ಈ ಆದರ್ಶಕ್ಕೆ ವಿರುದ್ಧವಾದವರೂ ಇದರಲ್ಲಿದ್ದಾರೆ. ರಾವಣ, ಮಂಥರೆ, ಕೆ ಕೆಯಿಯಿಂದ ಕೂಡ ನಮಗೆ ಜೀವನ ಪಾಠ ಲಭ್ಯವಿದೆ. ಹೀಗೆ, ರಾಮಾಯಣ ನಮಗೆ ಹಲವು ಪ್ರಕಾರದ ಜೀವನ ಪಾಠವನ್ನು ಕಲಿಸಿ ಹಿರಿಯರ ಆದರ್ಶ ಪಾಲನೆಯ ಮಹತ್ವವನ್ನು ತಿಳಿಸುತ್ತದೆ ಎಂದರು.

ಹಿರಿಯರ ಅನುಭವದಿಂದ ಲಾಭ ಏನು ಎನ್ನುವುದಕ್ಕೆ ಇದಕ್ಕಿಂತ ಹಿರಿದಾದ ಸಾಕ್ಷಿ ಅನಗತ್ಯ. ಕಾರಣ ಹಿರಿಯರ ಮಾತಿನ ಬಗ್ಗೆ ಅಸಡ್ಡೆ ತೋರದೆ ಅವರ ಅನುಭವ, ಸಲಹೆಗಳನ್ನು ಗೌರವಿಸುವ ಕಾರ್ಯವಾಗಬೇಕು. ನಮ್ಮನ್ನು ಮುಂದಿನ ಪೀಳಿಗೆ ಗೌರವಿಸಬೇಕಾದರೆ ನಾವು ಹಿರಿಯರ ಅನುಭವವನ್ನು ಅನುಷ್ಠಾನಕ್ಕೆ ತಂದು ಅದನ್ನು ಆದರಿಸುವ ಪ್ರವೃತ್ತಿ ಬೆಳೆಯಬೇಕು. ಇದು ಜೀವನದ ಸರ್ವ ಸಮಸ್ಯೆಗೆ ಪರಿಹಾರವಾಗಿ ಪಕ್ವತೆ ಸಾಧಿತವಾಗಲು ಕಾರಣವಾಗುತ್ತದೆ ಎಂದು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಸಲ್ಲಿಸಿದ 13 ಸಾಧಕರನ್ನು ಮತ್ತು ಪ್ರತಿಭಾವಂತ 20 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಬೆಂಗಳೂರು ಪ್ರಾಂತ ಉಪಾಧ್ಯಕ್ಷ ಜಿ.ಜಿ. ಹೆಗಡೆ, ಮಾತೃಪ್ರಧಾನರಾದ ವೀಣಾ ಜಿ. ಪುಳು, ಮುಷ್ಟಿಭಿಕ್ಷೆ ಪ್ರಧಾನ ಹೇರಂಬ ಶಾಸ್ತ್ರಿ, ವಿದ್ಯಾರ್ಥಿ ಪ್ರಧಾನ ಈಶ್ವರಪ್ರಸಾದ ಕನ್ಯಾನ, ಬೆಂಗಳೂರು ಉತ್ತರ ಮಂಡಲ ಅಧ್ಯಕ್ಷ ಎಲ್.ಆರ್. ಹೆಗಡೆ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ ಟಿ.ಜಿ., ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ. ಹೆಗಡೆ ಉಪಸ್ಥಿತರಿದ್ದರು. ರಾಮಚಂದ್ರ ಅಜ್ಜಕಾನ ಅವರನ್ನು ಛಾತ್ರಾವಾಸ ವ್ಯವಸ್ಥಾಪಕರನ್ನಾಗಿ ಶ್ರೀಗಳು ನಿಯುಕ್ತಿ ಮಾಡಿ ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net