

ಉಪ್ಪಿನಬೆಟಗೇರಿ: ಡೆಂಘ ರೋಗ ಮಾರಣಾಂತಿಕ ಕಾಯಿಲೆಯಾಗಿದ್ದು, ಅದರ ನಿಯಂತ್ರಣಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಧಾರವಾಡ ತಹಸೀಲ್ದಾರ್ ಡಿ.ಎಚ್. ಹೂಗಾರ ಹೇಳಿದರು.
ಗ್ರಾಮದ ಎಸ್.ಜಿ.ವಿ. ಪ್ರೌಢ ಹಾಗೂ ಕಾಲೇಜ್ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಡೆಂಘ ರೋಗ ನಿಯಂತ್ರಣ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೇಖರಿಸಿಟ್ಟ ನೀರಿನಲ್ಲಿ ಸೊಳ್ಳೆಗಳು ಇಟ್ಟ ಮೊಟ್ಟೆಯಿಂದ ಲಾರ್ವಾಗಳು ಉತ್ಪತ್ತಿಯಾಗಿ ಅವು ಕಚ್ಚುವುದರಿಂದ ಈ ರೋಗ ಹರಡುತ್ತದೆ. ಇದರಲ್ಲಿ ಡೆಂಘ ರೋಗ ಮುಖ್ಯವಾಗಿದ್ದು, ಬಹುಬೇಗ ಹರಡುವ ಸಾಂಕ್ರಾಮಿಕ ರೋಗವಾಗಿದೆ. ತಾಲೂಕಿನಾದ್ಯಂತ ಡೆಂಘ ರೋಗದ ಪ್ರಕರಣಗಳು ಕಂಡು ಬರುತ್ತಿವೆ. ಮುಮ್ಮಿಗಟ್ಟಿ ಗ್ರಾಮದಲ್ಲಿ ಈಗಾಗಲೆ ಆರು ಜನರಲ್ಲಿ ಈ ರೋಗ ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಸೇರಿ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಸೇರಿ ಪ್ರತಿ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ಮಾಡಿಸಲಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಡೆಂಘ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯವರು ಗಟಾರ ಸ್ವಚ್ಛತೆ, ಫಾಗಿಂಗ್ ಮಾಡಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.
ಪಂಚಾಯಿತಿಯವರ ಜೊತೆ ಸಾರ್ವಜನಿಕರು ಮನೆಗಳ ಸುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸ, ತ್ಯಾಜ್ಯಗಳನ್ನು ಎಸೆಯದೆ ಡೆಂಘೆಯಂತಹ ರೋಗಗಳ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.
ಧಾರವಾಡ ತಾಪಂ ಇಒ ಗಂಗಾಧರ ಕನಕೂರ ಮಾತನಾಡಿ, ಶುದ್ಧ ನೀರಿನ ಮೂಲಗಳಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಮೂರು ಅಡಿ ಎತ್ತರದೊಳಗೆ ಹಾರಾಡುತ್ತವೆ. ಮಕ್ಕಳಿಗೆ, ವೃದ್ಧರನ್ನು ಗುರಿಯಾಗಿಸಿ ಹಗಲಿನಲ್ಲಿ ಕಚ್ಚುತ್ತದೆ. ಈ ಜ್ವರಕ್ಕೆ ಔಷಧೋಪಚಾರವಿಲ್ಲ. ರೋಗದ ಲಕ್ಷಣಗಳ ಅನುಸಾರ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದು ಡೆಂಘ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಉಪ್ಪಿನಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಎಸ್. ಖಂಡೂನಾಯ್ಕ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಂ. ಸದಲಗಿ ಹಾಗೂ ವಿದ್ಯಾದಾನ ಸಮಿತಿ ಗೌರವ ಕಾರ್ಯದರ್ಶಿ ಜಿ.ಆರ್. ಜವಳಗಿ ಮಾತನಾಡಿದರು. ಪರದೆಯ ಮೇಲೆ ಡೆಂಘ ರೋಗದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ನಂತರ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅಮ್ಮಿನಬಾವಿ ಕಂದಾಯ ನಿರೀಕ್ಷಕ ಎಸ್.ಎಂ. ಗುರುವಡೆಯರ, ಪಿಡಿಒ ಬಿ.ಎ. ಬಾವಾಕಾನವರ, ಗ್ರಾಮ ಆಡಳಿತಾಧಿಕಾರಿ ಚೈತನ್ಯ ಮಾಳಿಯಾ, ನವಲಗುಂದ ಪಿಡಬ್ಲ್ಯುಡಿ ಅಧಿಕಾರಿ ಎಂ. ಮಂಜುನಾಥ, ಎನ್.ಎಸ್. ದಫೇದಾರ, ಹೇಮಲತಾ ಢಗೆ, ಚನಬಸಪ್ಪ ಮಸೂತಿ, ಮಲ್ಲಣ್ಣ ಅಷ್ಟಗಿ, ಮಂಜುನಾಥ ಸಂಕಣ್ಣವರ, ಧರೇಪ್ಪ ಬೊಬ್ಬಿ, ಪ್ರಾಚಾರ್ಯು ಕವಿತಾ ದೇಸಾಯಿ, ಮುಖ್ಯ ಶಿಕ್ಷಕ ಎಂ.ಎಂ. ಮುಲ್ಲಾ, ಶರಣು ಅಂಗಡಿ, ಕಾಶಪ್ಪ ದೊಡವಾಡ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.