ಎಲ್ಲರೂ ದೇಶದ ಅಭಿವೃದ್ಧಿಗೆ ಕೆಲಸ ಮಾಡಲಿ

02sunti01
Published on

ಸುಂಟಿಕೊಪ್ಪ: ದೇಶ ಮೊದಲು ಎಂಬ ಭಾವನೆಯಿಂದ ಎಲ್ಲರೂ ಒಂದಾಗಿ ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಸಲಹೆ ನೀಡಿದರು.

ಸುಂಟಿಕೊಪ್ಪ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ಮೊದಲಿಗೆ ಮನುಷ್ಯರೆಂದು ಅರ್ಥ ಮಾಡಿಕೊಂಡು ಮನುಷ್ಯ ಧರ್ಮವನ್ನು ಪಾಲಿಸಬೇಕು. ನಾವು ಪ್ರಪಂಚವನ್ನು ಬಿಟ್ಟು ಹೋಗುವ ಮೊದಲು ಎಷ್ಟರ ಮಟ್ಟಿಗೆ ಮನುಷ್ಯ ಧರ್ಮವನ್ನು ಪಾಲಿದ್ದೇವೆ ಎಂಬುದನ್ನು ಆರಿಯುವ ಪ್ರಯತ್ನವನ್ನು ಮಾಡಬೇಕೆಂದು ಹೇಳಿದರು.

ಸುಂಟಿಕೊಪ್ಪದ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘವು ಮಾನವೀಯತೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಪ್ರಂಶಶಿಸಿದರು.

ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಥವಾ ಯಾವುದೇ ಜನಾಂಗದವರಾಗಲಿ ತಾವು ಆಚರಿಸುವ ಧಾರ್ಮಿಕ ಆಚರಣೆ ಮತ್ತು ಹಬ್ಬ-ಹರಿದಿನಗಳ ಕುರಿತು ನಮ್ಮಲ್ಲಿ ಮಾಹಿತಿ ಇರಬೇಕು. ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ನಮ್ಮ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ ಮತ್ತು ಮಹತ್ವ ತಿಳಿಸಿಕೊಡುವಂತಾಗಬೇಕೆಂದು ಕರೆ ನೀಡಿದರು.

ಸುಂಟಿಕೊಪ್ಪ ಸಿಎಸ್‌ಐ ಇಮಾನ್ಯುವೆಲ್ ದೇವಾಲಯದ ಧರ್ಮಗುರು ಮಧುಕಿರಣ್ ಮಾತನಾಡಿ, ಸಹನೆ ಮತ್ತು ಪ್ರಾಮಾಣಿಕತೆಯಿಂದ ನಾವು ಕೆಲಸ ಮಾಡಿದರೆ ಯಶಸು ನಮ್ಮದೆ. ಜತೆಗೆ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು ತಾವೇ ಕಷ್ಟದಲ್ಲಿದ್ದರೂ ಪರರಿಗಾಗಿ ಮನಮಿಡಿಯುತ್ತಿರುವುದು ಶ್ಲಾಘನೀಯ ವಿಚಾರ ಎಂದು ಹೇಳಿದರು.

ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ, ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಶಬ್ಬೀರ್, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿದರು.

ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಸೋಮನಾಥ್, ರಫೀಕ್ ಖಾನ್, ಶಾಂತಿ, ವಸಂತಿ, ಮಂಜುಳಾ(ರಾಸಥಿ), ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್, ಉದ್ಯಮಿ ವಿಲಿಯಂ, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ,ಉಪಾಧ್ಯಕ್ಷ ಅವಲಕುಟ್ಟಿ, ಕಾರ್ಯದರ್ಶಿ ಮುನೀರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಎಂ.ಎ.ಉಸ್ಮಾನ್ ಇತರರು ಇದ್ದರು.

ಸಮಾರಂಭದ ಮೊದಲಿಗೆ ಸ್ವಸ್ಥ ವಿಶೇಷ ಚೇತನ ಶಾಲಾ ಮಕ್ಕಳಿಂದ ಸ್ವಾಗತ ನೃತ್ಯ ಜನಮನ ಸೂರೆಗೊಂಡಿತು. ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಬಾಲ ವಿಜ್ಞಾನಿಯಾಗಿ ಪ್ರಶಸ್ತಿ ಪಡೆದ ಸುಂಟಿಕೊಪ್ಪ ನಾಡು ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೀಶಾ ಅವರನ್ನು ಗಣ್ಯರು ಸನ್ಮಾನಿಸಿದರು. ನೃತ್ಯ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net