ಪ್ರತಿಯೊಬ್ಬರೂ ಬೆಟ್ಟದ ಸಂರಕ್ಷಣೆಗೆ ಮುಂದಾಗಲಿ

10sdp3
Published on

ಸಿದ್ದಾಪುರ: ಪ್ರತಿಯೊಬ್ಬರು ಅವರವರ ಬೆಟ್ಟವನ್ನು ಅಭಿವೃದ್ಧಿ ಮಾಡಿದರೆ ಸಮೃದ್ಧವಾದ ಬೆಳೆ ಬರುತ್ತದೆ. ಹಸಿರು ಪಟ್ಟಿ ನಮಗೆ ಅತ್ಯಗತ್ಯ. ವನೀಕರಣ, ಬೆಟ್ಟದ ಸಂರಕ್ಷಣೆಗೆ ಮುಂದಾಗಬೇಕು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ವೃಕ್ಷಲಕ್ಷ ಆಂದೋಲನ, ಸಿದ್ದಾಪುರದ ಟಿಎಂಎಸ್ ಸಹಕಾರದೊಂದಿಗೆ ಬುಧವಾರ ಆಯೋಜಿಸಿದ್ದ ಬೆಟ್ಟ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಸಿದ್ದಾಪುರ ತಾಲೂಕಿನಲ್ಲಿ 17 ಸಾವಿರ ಎಕರೆ ಬೆಟ್ಟ ಪ್ರದೇಶ ಬೆಳೆಗಾರರ ಬಳಿಯಿದೆ. ಆದರೆ, ಇವುಗಳ ಮಾಲೀಕತ್ವ ಅರಣ್ಯ ಮತ್ತು ಕಂದಾಯ ಇಲಾಖೆಯ ಹೆಸರಿಗಿದೆ. ಪಾಲಿಸಿದರೆ ಪಾಲು ಮೂಲಕ ಬೆಟ್ಟದಲ್ಲಿ ಸಾಂಬಾರ ಬೆಳೆಗಳನ್ನು ಬೆಳೆದು ಆರ್ಥಿಕ ಅಭಿವೃದ್ಧಿ ಸಾಧಿಸಲು ಅವಕಾಶವಿದೆ. ಬೆಟ್ಟ ಕುರಿತಂತೆ ಅರಣ್ಯ ಹಾಗೂ ಕಂದಾಯ ಇಲಾಖೆಯವರು ಒಂದೊಂದು ಕಾಯ್ದೆ ಹೇಳುತ್ತಿದ್ದಾರೆ. ಇದರಿಂದಾಗಿ ಅನೇಕ ಕಡೆ ಅಹಿತಕರ ಘಟನೆಗಳು ನಡೆಯುತ್ತಿವೆ. ಎಲ್ಲರೂ ಸೋಲಾರ್ ಯೋಜನೆಯ ಸೌಲಭ್ಯ ಪಡೆಯಲು ಸಹಕಾರಿ ಸಂಘಗಳು ಸಹಕರಿಸಬೇಕು ಎಂದರು.

ಅಡಕೆ ಟಾಸ್ಕ್​ಫೋರ್ಸ್​ನ ಮಾಜಿ ಸದಸ್ಯ, ಯಡಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ಮಾತನಾಡಿ, ಜಿಲ್ಲೆಯಲ್ಲಿ ಬಹುತೇಕ ಸಹಕಾರಿ ಸಂಘಗಳು ಲಾಭದಲ್ಲಿದ್ದು, ಆ ಲಾಭದಲ್ಲಿ ಕೆಲವು ಅಂಶವನ್ನು ಪರಿಸರ ನಿಧಿಯನ್ನಾಗಿ ತೆಗೆದಿಟ್ಟು ಪರಿಸರ ಸಂರಕ್ಷಿಸುವಲ್ಲಿ ಮುಂದಾಗಬೇಕು ಎಂದರು.

ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮಾತನಾಡಿ, ಬೆಟ್ಟ ಸಂರಕ್ಷಣೆಗೆ ನಾವೂ ಬೆನ್ನಿಗೆ ನಿಲ್ಲುತ್ತೇವೆ. ಬೆಟ್ಟ ಸವಲತ್ತನ್ನು ಪಡೆಯುವಲ್ಲಿ ಅಧಿಕಾರಿಗಳು ಅಡೆ ತಡೆ ಮಾಡುವುದಿಲ್ಲ. ಆದರೆ ಬೆಟ್ಟ ಭೂಮಿಯನ್ನು ಮಾರುವಂತಿಲ್ಲ ಎಂದರು.

ವಲಯ ಅರಣ್ಯಾಧಿಕಾರಿ ಅಜಯಕುಮಾರ ಮಾತನಾಡಿ, ಸಾಮೂಹಿಕ ಬೆಟ್ಟಗಳ ಸುಸ್ಥಿರ ನಿರ್ವಹಣೆ ಆಗಬೇಕು. ಉಪ್ಪಾಗೆ, ಮುರುಗಲು ಇಂತಹ ಬೆಳೆಗಳನ್ನು ಸಹ ಬೆಟ್ಟದಲ್ಲಿ ಬೆಳೆಯಬಹುದು. ನಮಗೆ ಕೊಟ್ಟ ರೆಕ್ಕೆಯನ್ನು ಹಾರಲು ಬಳಸಬೇಕೇ ವಿನಃ ಅದನ್ನು ಬೇರೆ ಕೆಲಸಕ್ಕೆ ಬಳಸಿದರೆ ರೆಕ್ಕೆ ತುಂಡಾಗುತ್ತದೆ ಎಂದರು.

ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾವಯವ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ , ಶ್ರೀಧರ ಬಿಚ್ಚುಗತ್ತಿ ಮಾತನಾಡಿದರು. ಜಿ.ಜಿ.ಹೆಗಡೆ ಬಾಳಗೋಡ ನಿರ್ವಹಿಸಿದರು. ಟಿಎಂಎಸ್ ನಿರ್ದೇಶಕ ಎಂ.ಎನ್. ಹೆಗಡೆ ತಲೆಕೆರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net