

ಗಂಗಾವತಿ: ಜೀವನಾಡಿ ತುಂಗಭದ್ರಾ ಜಲಾಶಯದ ರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಜಲ ರಕ್ಷಣೆ ಯೋಜನೆಗಳ ಬಗ್ಗೆ ಗಮನಹರಿಸಬೇಕಿದೆ ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮುಖ್ಯಸ್ಥ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.
ನಗರದ ಕನ್ನಡ ಜಾಗೃತಿ ಸಮಿತಿಯ ಭುವನೇಶ್ವರಿ ಭವನದಲ್ಲಿ ಕಾವ್ಯಲೋಕ, ನಿರ್ಮಲ ತುಂಗಭದ್ರಾ ಅಭಿಯಾನದಿಂದ ಶನಿವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ನಿರ್ಮಲ ಅಭಿಯಾನದ ಮೂಲಕ ತುಂಗಭದ್ರಾ ನೀರು ಕಲುಷಿತವಾಗುತ್ತಿರುವುದನ್ನು ನಿಯಂತ್ರಿಸಲಾಗುತ್ತಿದೆ. ನದಿ ಹರಿಯುವ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಸಾಹಿತಿ, ಶಿಕ್ಷಕ ರಾಘವೇಂದ್ರ ದಂಡಿನ್ ಮಾತನಾಡಿ, ನಾಡಿನ ನೆಲ-ಜಲ ಉಳಿಸುವ ಹೋರಾಟಗಳಿಗೆ ಕವಿಗಳು ಶುದ್ಧ ಅಂತಃಕರಣದಿಂದ ಕಾವ್ಯ ರಚಿಸುವ ಮೂಲಕ ನೈತಿಕ ಬೆಂಬಲ ನೀಡಬೇಕು ಎಂದರು. ಅರಳಹಳ್ಳಿ ಶ್ರೀರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಕವಿಗೋಷ್ಠಿಯಲ್ಲಿ 10ಕ್ಕೂ ಹೆಚ್ಚು ಕವಿಗಳು ಜಲರಕ್ಷಣೆಯ ಕುರಿತು ಕವನ ವಾಚಿಸಿದರು.
ಮುಖಂಡರಾದ ಮಂಜುನಾಥ ಕಟ್ಟಿಮನಿ, ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಸದಸ್ಯರಾದ ಆಶೀಶ ಕೃಷ್ಣ, ತಾರಾ ಸಂತೋಷ ಮೇಹರವಾಡೆ ಇತರರಿದ್ದರು.