

ಬೆಳಗಾವಿ: ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ 2047ರ ಸಂದರ್ಭದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಪ್ರಧಾನಮಂತ್ರಿ ಘೋಷಿಸಿದ್ದಾರೆ. ಇದನ್ನು ಸಾಕಾರಗೊಳಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ ಹೇಳಿದರು.
ನಗರದ ಎಸ್‌ಕೆಇ ಸೊಸೈಟಿಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಕೆಇ ಸಂಘಗಳ ಆರ್‌ಪಿಡಿ ಮತ್ತು ಜಿಎಸ್‌ಎಸ್ ಕಾಲೇಜಿನ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ರಾಣಿ ಚನ್ನಮ್ಮ ವಿವಿ ಉಪಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ಈ ಸಂಸ್ಥೆ ಗುಣಮಟ್ಟದ ಬೋಧನೆಗೆ ಖ್ಯಾತಿಯಾಗಿದ್ದು, ಸ್ವತಂತ್ರ ವಿಶ್ವವಿದ್ಯಾಲಯವಾಗಬೇಕು ಎಂದರು.
ಕುಲಸಚಿವೆ ರಾಜಶ್ರೀ ಜೈನಾಪುರ ಮಾತನಾಡಿ, ಆರ್‌ಸಿಯು 358 ಕಾಲೇಜುಗಳನ್ನು ಹೊಂದಿರುವ ಕರ್ನಾಟಕದ ಅತಿದೊಡ್ಡ ವಿಶ್ವವಿದ್ಯಾಲಯವಾಗಿದೆ. ಎಸ್‌ಕೆಇ ಸೊಸೈಟಿಗೂ ಇದು ಹೆಮ್ಮೆಯ ಕ್ಷಣವಾಗಿದೆ ಎಂದರು.
ಎಸ್‌ಕೆಇ ಸೊಸೈಟಿ ಅಧ್ಯಕ್ಷ ಡಾ ಕಿರಣ ಠಾಕೂರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾದ ಬಾಬುರಾವ್ ಠಾಕೂರ, ಗಂಗಾಧರರಾವ್ ದೇಶಪಾಂಡೆ, ಜೀವನರಾವ್ ಯಾಳಗಿ, ಪುಂಡಲಿಕ ಕಟಗಡೆ, ವೈ.ಕೆ. ಪ್ರಭು ಈ ಸಂಸ್ಥೆ ಪ್ರಾರಂಭಿಸಿ, ಶಿಕ್ಷಣ ಕ್ರಾಂತಿಗೆ ಕಾರಣರಾಗಿದ್ದಾರೆ ಎಂದರು.
ಗೋವಾ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಪರಶುರಾಮ ಭಾವು ನಂದಿಹಳ್ಳಿ, ಕೃಷ್ಣ ಮೆನ್ಸೆ ಮತ್ತು ವಿಠ್ಠಲರಾವ್ ಯಾಳಗಿ ಅವರನ್ನು ಸನ್ಮಾನಿಸಲಾಯಿತು. ಬಾಲಚಂದ್ರ ಕಲಘಟಗಿ, ಆರ್.ಡಿ. ಶಾನಭಾಗ, ವಿನಾಯಕ ಅಜಗಾಂವಕರ, ಮಾಧವ ಕಾಮತ, ಎ.ಎಂ. ಪಾಟೀಲ ಇದ್ದರು. ಪ್ರಾಚಾರ್ಯ ಬಿ.ಎಲ್. ಮಜೂಕರ ಸ್ವಾಗತಿಸಿದರು. ಡಾ.ಕಿರಣ ಠಾಕೂರ ಅತಿಥಿಗಳನ್ನು ಗೌರವಿಸಿದರು.