ಪ್ರತಿಯೊಬ್ಬರೂ ಸೊಳ್ಳೆ ಕಡಿತದಿಂದ ದೂರವಿರಲಿ

19BTP01
ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಮಲೇರಿಯಾ ವಿರೋಧಿ ಮಾಸಾಚಾರಣೆ ಕುರಿತು ಕಾರ್ಯಾಗಾರ ಹಾಗೂ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.ಕೆ.ಆರ್.ಪ್ರಕಾಶ್, ಡಾ.ಪೂಜಾ, ಮಂಜುನಾಥ್, ಪಾಂಡು, ಗೊರಳ್ಳಿ ಜಗದೀಶ್, ಆಲನಹಳ್ಳಿ ಕೆಂಪರಾಜು, ಮೋಹನ್, ಪಿ.ಕುಮಾರ, ಸಿಬ್ಬಂದಿ ಚಿನ್ನಮ್ಮ, ದೇವಕಿ ಇದ್ದರು.
Published on

ಬೆಟ್ಟದಪುರ : ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸೊಳ್ಳೆ ಕಡಿತದಿಂದ ದೂರವಿರಬೇಕು. ಜ್ವರ, ಮೈಕೈ, ತಲೆನೋವು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಅರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಕೆ.ಆರ್.ಪ್ರಕಾಶ್ ಹೇಳಿದರು.

ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಖಾಸಗಿ ಕ್ಲಿನಿಕ್‌ಗಳ ವೈದ್ಯರು ಮತ್ತು ಸಿಬ್ಬಂದಿಗೆ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತ ಕಾರ್ಯಾಗಾರ ಹಾಗೂ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲೇರಿಯಾ ಅನಾಫಿಲೀಸ್ ಎಂಬ ಸೋಂಕಿತ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವ ಕಾಯಿಲೆ ಆಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೊಂದಿದ್ದು, ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ನಿವಾಸಿಗಳಲ್ಲಿ ಹಾಗೂ ಕುಟುಂಬದವರಲ್ಲಿ ಮಲೇರಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ ಎಂದರು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ ಮಾತನಾಡಿ, ಈಗಾಗಲೇ ಮಳೆಗಾಲ ಶುರುವಾಗಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುವ ಸಾಧ್ಯತೆಯಿದೆ. ಇವುಗಳಿಂದ ಮಲೇರಿಯಾ, ಆಶ್ರಿತ ರೋಗಗಳು ಬರುವ ಸಾಧ್ಯತೆಯಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಟ್ಟಡಗಳ ನಿರ್ಮಾಣ ಪ್ರದೇಶ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಬೇಕು. ಜಾನುವಾರುಗಳು ನೀರು ಕುಡಿಯುವ ಶೇಖರಣಾ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂ ರಕ್ಷಣಾ ವಿಧಾನಗಳನ್ನು ಸಹ ಅನುಸರಿಸಬೇಕು ಎಂದುತಿಳಿಸಿದರು.

ಮಕ್ಕಳಿಂದ ಅರಿವು: ಮಲೇರಿಯಾ ಕುರಿತು ಬೆಟ್ಟದಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ಡಿಟಿಎಂಎನ್ ಶಾಲೆಯ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಿದರು. ಎಸ್‌ಎಂಎಸ್ ಶಾಲೆಯ ವಿದ್ಯಾರ್ಥಿಗಳು ಚಿತ್ರಕಲೆ ಮೂಲಕ ಅರಿವು ಮೂಡಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ಪಾಂಡು, ಶಾಲೆಯ ಶಿಕ್ಷಕರಾದ ಗೊರಳ್ಳಿ ಜಗದೀಶ್, ಆಲನಹಳ್ಳಿ ಕೆಂಪರಾಜು, ಮೋಹನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಕುಮಾರ, ಸಿಬ್ಬಂದಿ ಚಿನ್ನಮ್ಮ, ದೇವಕಿ, ಕುಸುಮಾ, ಕಾವ್ಯ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net