

ಹಳಿಯಾಳ: ಜಾನುವಾರುಗಳನ್ನು ಪ್ರೀತಿಯಿಂದ ಸಾಕಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ತಾಲೂಕಿನ ದುಸಗಿ ಗ್ರಾಮದ ಸರ್ಕಾರಿ ಗೋಶಾಲೆಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರ ಅನುದಾನದಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮತ್ತು ಫಲಾನುಭವಿಗಳಿಗೆ ಚಾಪ್‌ಕಟ್ಟರ್ ಯಂತ್ರ ವಿತರಿಸಿ ಅವರು ಮಾತನಾಡಿದರು. ಮೂಕ ಪ್ರಾಣಿಗಳ ಮೇಲೆ ಹೆಚ್ಚು ಪ್ರೀತಿ ಇರಬೇಕು. ಪ್ರತಿಯೊಬ್ಬರೂ ಗೋವಿನ ಸೇವೆ ಮಾಡಬೇಕು ಎಂದರು.
ಗೋಶಾಲೆ ಪುಣ್ಯದ ಸ್ಥಳ. ಸರ್ಕಾರದ ಕಡೆ ಕೈ ಮಾಡದೆ ಆರ್ಥಿಕವಾಗಿ ಸಬಲರಾದವರು ಸಹಾಯ ಮಾಡಬೇಕು ಎಂದರು.
ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಸಂಘ ರಚಿಸಿ, ಸ್ವಯಂ ಪ್ರೇರಣೆಯಿಂದ ಗೋಶಾಲೆಗೆ ಸಹಾಯ ಮಾಡಲಿ. ಕುಡಿಯುವ ನೀರಿನ ಸಮಸ್ಯೆ ಹಾಗೂ ಗೋವುಗಳಿಗೆ ಮೇವಿನ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಪಶು ವೈದ್ಯಾಧಿಕಾರಿ ಡಾ. ನದಾಫ್, ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ, ಪುರಸಭೆ ಸದಸ್ಯ ರವಿ ತೋರಣಗಟ್ಟಿ, ಗ್ರಾಪಂ ಸದಸ್ಯ ರಾಘವೇಂದ್ರ ಸಾಂಬ್ರೇಕರ, ಸುಭಾಷ ಕೊರ್ವೆಕರ ಇತರರು ಇದ್ದರು.