ಪ್ರತಿಯೊಬ್ಬರೂ ತ್ಯಾಗ ಮನೋಭಾವ ಬೆಳೆಸಿಕೊಳ್ಳಲಿ

19ATHANIGRAMIN1
Published on

ಅಥಣಿ ಗ್ರಾಮೀಣ: ತ್ಯಾಗದಲ್ಲಿ ಸಂತೋಷ ಅಡಗಿದೆ. ಹಾಗಾಗಿ ಪ್ರತಿಯೊಬ್ಬರೂ ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪಪೂ ಬಾಲಾಚಾರ್ಯ ಧರ್ಮಪ್ರಭಾವಕ ಶ್ರೀ 108 ಸಿದ್ಧಸೇನ ಮುನಿಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಪಂಚಕಲ್ಯಾಣ ಮಹಾಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ವ್ರತ ಪಾಲನೆಯಿಂದ ಜೀವನ ಪಾವನವಾಗುವುದು. ಶ್ರವಣ ಬೆಳಗೋಳದಲ್ಲಿ ಹಮ್ಮಿಕೊಂಡಿದ್ದ ಮಹಾಭಿಷೇಕ ಕಾರ್ಯಕ್ರಮಕ್ಕೆ 108 ಬಸ್‌ಗಳ ಉಚಿತ ವ್ಯವಸ್ಥೆ ಮಾಡಿದ ಶಾಸಕ ಲಕ್ಷ್ಮಣ ಸವದಿ ಕಾರ್ಯ ಶ್ಲಾಘನೀಯ. ಝುಂಜರವಾಡ ಗ್ರಾಮದಲ್ಲಿ ಕಲ್ಯಾಣ ಮಂಟಪ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಮಹಾತ್ಮರು, ಮಹಾಮುನಿಗಳು ಭಕ್ತಿ ಮಾರ್ಗ ಹೇಳಿಕೊಟ್ಟು ಮುಕ್ತಿಗೆ ದಾರಿ ತೋರಿಸುತ್ತಾರೆ. ಧಾರ್ಮಿಕತೆಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ‘ಪುರಪಿ ಜನನಂ, ಪಿನರಪಿ ಮರಣಂ’ ಬಾರದಂತೆ ಮುನಿಮಹಾರಾಜರ ಆಧ್ಯಾತ್ಮಿಕ ಪ್ರವಚನ ಕೇಳಬೇಕು ಎಂದರು.

ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಜೈನ ಸಮುದಾಯ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿದೆ. ದಾನಧರ್ಮಕ್ಕೆ ಜೈನ ಸಮುದಾಯದವರು ಹೆಸರಾಗಿದ್ದಾರೆ ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಇದಕ್ಕೂ ಪೂರ್ವ ಮಂಗಲವಾದ್ಯ ಘೋಷ, ಸುಪ್ರಭಾತ ಸ್ತೋತ್ರ, ಪಂಚಾಮೃತ ಅಭಿಷೇಕ, ಮಹಾಶಾಮತಿ ಮಂತ್ರ, ರಾಜ್ಯವೈಭವ, ಸವಾಲ ಹಾಗೂ ಸಾಂಸ್ಕೃತಿಕ, ಸಂಗೀತ ಆರತಿ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ಸಾಧನಾರತ್ನ ಆಚಾರ್ಯ ಶ್ರೀ 108 ಅಮೀತಸೇನ ಮುನಿಮಹಾರಾಜರು. ಪಪೂ ಶ್ರೀ 108 ವಾತ್ಸಲ್ಯಮೂರ್ತಿ ಸಮುದ್ರಸೇನ ಮುನಿಮಹಾರಾಜರು. ಪಪೂ ಶ್ರೀ 108 ಮಲ್ಲಿಸೇನ ಮುನಿಮಹಾರಾಜರು. ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಬಾಹುಬಲಿ ಉಪಾಧ್ಯೆ, ಭರತೇಶ ಉಪಾಧ್ಯೆ, ಪ್ರದೀಪ ಉಪಾಧ್ಯೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net