

ಗುಂಡ್ಲುಪೇಟೆ: ದೇಶದ ಎಲ್ಲ ಪ್ರಜೆಗಳೂ ಕಾನೂನು ಪಾಲಿಸಿದರೆ, ಕಾನೂನು ಎಲ್ಲರನ್ನೂ ರಕ್ಷಿಸುತ್ತದೆ ಎಂದು ಚಾಮರಾಜನಗರ ಜಿಲ್ಲಾ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಶ್ರೀಧರ್ ಹೇಳಿದರು.
ತಾಲೂಕಿನ ಹಂಗಳ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಮಕ್ಕಳ ಹಕ್ಕುಗಳ ಬಗ್ಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಮುಂತಾದ ಅನಿಷ್ಟಗಳನ್ನು ತಡೆಗಟ್ಟಲು ಸರ್ಕಾರ ಕಾನೂನುಗಳನ್ನು ರೂಪಿಸಿದೆ. ಪ್ರತಿ ವ್ಯಕ್ತಿಯ ಜನನದಿಂದ ಮರಣದವರೆಗೂ ದೇಶದ ಕಾನೂನುಗಳನ್ನು ಪಾಲಿಸಬೇಕಾಗಿದೆ. ಆದ್ದರಿಂದ ಎಲ್ಲರಿಗೂ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆವುಗಳನ್ನು ಎಲ್ಲರೂ ಅಳವಡಿಸಿಕೊಳ್ಳುವುದರಿಂದ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಸರಸ್ವತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸವಿತಾ, ಕಾಲೇಜಿನ ಪ್ರಾಂಶುಪಾಲ ಬಿ.ಜಿ.ಗೋಪಾಲಕೃಷ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ, ಸೃಷ್ಟಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೃಷಭೇಂದ್ರ ಸೇರಿದಂತೆ ಹಲವರು ಇದ್ದರು.
ಕಾರ್ಯಕ್ರಮದ ನಂತರ ನ್ಯಾಯಾಧೀಶ ಎಂ.ಶ್ರೀಧರ್ ಅವರು ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ತೆರಳಿ, ಪರಿಶೀಲನೆ ನಡೆಸಿ ರೋಗಿಗಳಿಂದ ಅಲ್ಲಿ ದೊರಕುವ ಸೇವೆಗಳ ಬಗ್ಗೆ ಮಾಹಿತಿ ಪಡೆದರು.