ಪ್ರತಿಯೊಬ್ಬರೂ ದೇಶದ ಏಕತೆ ಕಾಪಾಡಲಿ

15 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ.ಬಿ.ಆರ್​.ಅಂಬೇಡ್ಕರ್​ ಸಂವಿಧಾನದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ದೊರೆಯುವಂತೆ ಮಾಡಿದ್ದಾರೆ. ಪ್ರತಿಯೊಬ್ಬರೂ ದೇಶದ ಏಕತೆ ಕಾಪಾಡಿಕೊಂಡು ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್​ ಹೇಳಿದರು.
ವಿಶ್ವ ಪ್ರಜಾಪ್ರಭುತ್ವ ದಿನ ನಿಮಿತ್ತ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್​ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಅತ್ಯುನ್ನತ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಶಕ್ತಿಯುತ ಮತ್ತು ಕ್ರಿಯಾತ್ಮಕ ಶಕ್ತಿಯಾಗಿದೆ. ಭಾರತ ದೇಶ ಅತ್ಯಂತ ಭವ್ಯ, ಶಕ್ತಿಶಾಲಿ ಮತ್ತು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶವಾಗಿದೆ ಎಂದರು.
ವಿಶ್ವ ಪ್ರಜಾಪ್ರಭುತ್ವ ದಿನ ನಿಮಿತ್ತ ಬೀದರ್​ನಿಂದ ಚಾಮರಾಜನಗರವರೆಗೆ ಬೃಹತ್​ ಮಾನವ ಸರಪಳಿ ನಿರ್ಮಿಸಿ ವಿಶಿಷ್ಟ ದಾಖಲೆ ಸೃಷ್ಟಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 3.5 ಲಕ್ಷ ಜನರು ಆನ್​ಲೈನ್​ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲೇ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ವಿಶ್ವಾದ್ಯಂತ ಪ್ರಜಾಪ್ರಭುತ್ವದ ಮೌಲ್ಯ, ಆದರ್ಶ, ತತ್ವಗಳು ಮತ್ತು ಅದರ ಅನ್ವಯಿಕತೆಯನ್ನು ಒಳಗೊಂಡ ನಿರ್ಣಯ ಹೊರಡಿಸಿದ ಸೆ. 15 ಐತಿಹಾಸಿಕ ದಿನ. ಪ್ರಜಾಪ್ರಭುತ್ವ ರಕ್ಷಿಸುವುದು, ಅದರ ಮೌಲ್ಯ ಉತ್ತೇಜಿಸುವುದು ಪ್ರಜಾಪ್ರಭುತ್ವ ದಿನಾಚರಣೆ ಉದ್ದೇಶ. ಈ ವರ್ಷ ಸರ್ಕಾರದಿಂದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತೇಗೂರಿನಿಂದ ಮಾವಿನಕೊಪ್ಪದವರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಎಂದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್​.ಎಚ್​.ಕೋನರೆಡ್ಡಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹುಡಾ ಅಧ್ಯಕ್ಷ ಶಾಕೀರ್​ ಸನದಿ, ಮಾಜಿ ಸಂಸದ ಐ.ಜಿ.ಸನದಿ, ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್​, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ, ಕೃವಿವಿ ಕುಲಪತಿ ಡಾ. ಪಿ,ಎಲ್​. ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ, ಡಿಡಿಪಿಐ ಎಸ್​.ಎಸ್​.ಕೆಳದಿಮಠ, ವಿವಿಧ ಇಲಾಖೆ ಅಧಿಕಾರಿಗಳು, ಶಾಲೆ, ಕಾಲೇಜು ವಿದ್ಯಾರ್ಥಿಗಳು, ಇತರರು ಇದ್ದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸಂವಿಧಾನ ಪೀಠಿಕೆ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net