

ನಾಗಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ವೈಜ್ಞಾನಿಕವಾಗಿ ಸಂಭವಿಸುವ ಹಲವು ವಿಸ್ಮಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಅದನ್ನೇ ಸತ್ಯವೆಂದು ತಿಳಿಯದೆ ಪ್ರತಿಯೊಬ್ಬರೂ ಅನ್ವೇಷಣೆಗಳ ಮೂಲಕ ವೈಜ್ಞಾನಿಕ ಲೋಕದ ಸತ್ಯವನ್ನು ಅರಿಯುವ ಅಗತ್ಯವಿದೆ ಎಂದು ಮಂಡ್ಯದ ವಿಜ್ಞಾನ ಪರಿಚಾರಕ ಲೋಕೇಶ್ ತಿಳಿಸಿದರು.
ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ನಾಗಮಂಗಲ ಕನ್ನಡ ಸಂಘ ಮತ್ತು ವಿಜ್ಞಾನ ವೇದಿಕೆ ಸಹಯೋಗದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈಜ್ಞಾನಿಕ ಲೋಕದಲ್ಲಿನ ವಿಸ್ಮಯಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಂಭವಿಸುತ್ತಿರುತ್ತವೆ. ಆದರೆ ಆ ರೀತಿಯ ಸತ್ಯಗಳನ್ನು ತಿಳಿಯಲು ವಿಜ್ಞಾನದ ಅರಿವು ಅವಶ್ಯವಿದೆ. ಹಲವು ಶತಮಾನಗಳಿಗೊಮ್ಮೆ 4 ಗ್ರಹಗಳನ್ನು ವೀಕ್ಷಣೆ ಮಾಡುವ ಅವಕಾಶ ಬಂದೊದಗಿದೆ. ವಿಶ್ವದ ಕೌತುಕದ ಸನ್ನಿವೇಶ ಇದಾಗಿದೆ. ಒಂದೇ ಹಾದಿಯಲ್ಲಿ ಇಷ್ಟು ಗ್ರಹಗಳು ಕಾಣಲು ಶತಮಾನಗಳು ಬೇಕು. 6 ಗ್ರಹಗಳನ್ನು ಒಟ್ಟಿಗೆ ನೋಡುವುದು ಇದು ಅಪರೂಪದ ಸನ್ನಿವೇಶವಾಗಿದೆ. ಬರಿಗಣ್ಣಿಗೆ 2 ಗ್ರಹಗಳು ಕಾಣುವುದಿಲ್ಲ. ಇನ್ನು 4 ಗ್ರಹಗಳು ಮಾತ್ರ ಗೋಚರವಾಗುತ್ತಿದ್ದು, ಅವುಗಳನ್ನು ವೀಕ್ಷಿಸುವ ಮೂಲಕ ಸಾರ್ವಜನಿಕರು ವಿಜ್ಞಾನದ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಿ ಎಂದರು.
ನೂರಾರು ಜನರಿಂದ ವೀಕ್ಷಣೆ: ತಾಲೂಕಿನ ಜಿ.ಬೊಮ್ಮನಹಳ್ಳಿ ಶಾಲೆಯ ವಿದ್ಯಾರ್ಥಿಗಳು, ಪಟ್ಟಣ ವ್ಯಾಪ್ತಿಯ ಹಲವು ಶಾಲೆಗಳ ವಿದ್ಯಾರ್ಥಿಗಳು, ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಿಕ್ಷಕರು, ಮಹಿಳೆಯರು, ವೃದ್ಧರು ಸೇರಿದಂತೆ ನೂರಾರು ಸಂಖ್ಯೆಯ ಸಾರ್ವಜನಿಕರು ಟೆಲಿಸ್ಕೋಪ್ ಮೂಲಕ ಗ್ರಹಗಳ ವೀಕ್ಷಣೆ ಮಾಡಿ ಸಂತೋಷವ್ಯಕ್ತಪಡಿಸಿದರು.
ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಣ್ಣ ಮಾಯಣ್ಣಗೌಡ, ನಾಗಮಂಗಲ ವಿಜ್ಞಾನ ವೇದಿಕೆಯ ನರಸಿಂಹಪ್ರಸಾದ್, ಕನ್ನಡ ಸಂಘದ ಪದಾಧಿಕಾರಿಗಳಾದ ಎನ್.ಸಿ.ಶಿವಕುಮಾರ್, ಮುರಳೀಧರ್, ನಟರಾಜು, ಮಂಜುನಾಥ್, ನಾ.ಸು.ನಾಗೇಶ್, ಆದಿಶೇಷ, ಉಮಾ, ಚನ್ನಯ್ಯ ಸೇರಿದಂತೆ ಮತ್ತಿತರಿದ್ದರು.