ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರಿಯಲಿ

HNL ROSHANI
Published on

ಹಾನಗಲ್ಲ: ಸಂವಿಧಾನವನ್ನು ಯಾರು ಗೌರವಿಸುತ್ತಾರೋ ಅಂತವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಸ್ಥಳೀಯ ರೋಶನಿ ಸಮಾಜ ಸೇವಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ಸಮರ್ಪಣಾ ದಿನಾಚರಣೆ ಪ್ರಯುಕ್ತ ಸಂವಿಧಾನದ ಮಹತ್ವ ಮತ್ತು ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ 26 ವಸತಿ ನಿಲಯದ 2300ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಿಧಾನ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬರಿಗೂ ಚಿಕ್ಕಂದಿನಲ್ಲಿಯೆ ಸಂವಿಧಾನದ ಮಹತ್ವ, ಸಂವಿಧಾನದ ಮೌಲ್ಯಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿಯುವ ಹಾಗೂ ತಿಳಿ ಹೇಳುವ ಕೆಲಸ ಆಗಬೇಕಿದೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿ ಇಂದು ನಮಗೆಲ್ಲ ಉತ್ತಮ, ಗೌರವಯುತ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ಪ್ರಗತಿಪರ ಸಂಘಟನೆಯ ಡಾ.ಎನ್.ಎಫ್. ಕಮ್ಮಾರ ಮಾತನಾಡಿ ಸಂವಿಧಾನ ಎಂಬುದು ಅಂಬೇಡ್ಕರ್ ಅವರು ನಮಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ನಾವೆಲ್ಲರೂ ಸಂವಿಧಾನದ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು ಮತ್ತು ಅದನ್ನು ಗೌರವಿಸಬೇಕು. ಇಂದು ನಮಗೆ ಸಮಾನ ಅವಕಾಶಗಳು ದೊರೆಯುತ್ತಿರುವುದಕ್ಕೆ ಮುಖ್ಯ ಕಾರಣ ಸಂವಿಧಾನವಾಗಿದೆ. ಈ ಸಂವಿಧಾನ ಇಲ್ಲದಿದ್ದರೆ ನಾವೆಲ್ಲ ಬದುಕು ಕಟ್ಟಿಕೊಳ್ಳಲು ಪರದಾಡಬೇಕಿತ್ತು. ಆದ್ದರಿಂದ ಸಂವಿಧಾನ ನಮಗೆ ಕೊಟ್ಟ ಅವಕಾಶಗಳು, ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ನಡೆಯುವುದು ಅವಶ್ಯಕವಾಗಿದೆ ಎಂದರು.

ಸಂವಾದದಲ್ಲಿ ಪಲ್ಲವಿ ಸುನೀಲ ಕಾಟ್ನಳ್ಳಿ ಪ್ರಥಮ, ರಾಜೇಶ್ವರಿ ರಾಜಪ್ಪ ಕಿಳ್ಳಿತ್ಯಾತರ ದ್ವಿತೀಯ ಹಾಗೂ ಚೇತನಾ ಓಣಿಕೇರಿ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.

ವಸತಿ ನಿಲಯದ ಮೇಲ್ವಿಚಾರಕಿ ನಾಗರತ್ನಾ ಕೊಂಗಿ, ಸಿಬ್ಬಂದಿ ಡಿಗ್ಗಪ್ಪ ಲಮಾಣಿ ಹಾಗೂ ವಸತಿ ನಿಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net