ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ

koimsa
Published on

ಮಡಿಕೇರಿ: ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯುವಂತಾಗಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಅರೆ ವಿಶೇಷ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಹಳೇ ಕಟ್ಟಡದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಅರೆ ವಿಶೇಷ ಕೊಠಡಿಯನ್ನು ಸ್ಥಾಪಿಸಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಆರೋಗ್ಯ ಸೇವೆ ಕಲ್ಪಿಸಲು ಮುಂದಾಗಲಾಗಿದೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಆ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೋಗಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಹಿಂದೆ ರೋಗಿಗಳಿಗೆ ಚೀಟಿಯನ್ನು ನೀಡಲಾಗುತ್ತಿತ್ತು. ಈಗ ರೋಗಿಯ ಸಂಪೂರ್ಣ ವಿವರ ಜತನ ಮಾಡಲು ಪುಸ್ತಕ ಮಾದರಿಯಲ್ಲಿ ಹೊರತರಲಾಗಿದ್ದು, ಇದರಿಂದ ಹಲವು ವರ್ಷದ ರೋಗಿಯ ಮಾಹಿತಿ ದೊರೆಯಲಿದೆ. ಇದನ್ನು ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲವಾಗಲಿದೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೋಗಿಗಳ ಆರೋಗ್ಯ ಸೇವೆ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು. ಕೊಡಗು ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಸಿಟಿ, ಎಂಆರ್‌ಐ, ಎಕ್ಸ್‌ರೇ ಹೀಗೆ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಲಭ್ಯವಿದೆ. ವಿಶೇಷ ವಾರ್ಡ್ ಇಲ್ಲದಿರುವುದನ್ನು ಗಮನಿಸಿ ಸೆಮಿ ಸ್ಪೆಷಲ್ ವಾರ್ಡ್‌ನ್ನು ಸ್ಥಾಪಿಸಿರುವುದು ವಿಶೇಷವಾಗಿದೆ ಎಂದು ಡಾ.ಮಂತರ್ ಗೌಡ ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸದಾಗಿ ಒಳರೋಗಿಗಳಿಗೆ ಚೀಟಿ ಬದಲಾಗಿ ರೋಗಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಮಾಹಿತಿ ದೊರೆಯುವಂತಾಗಲು ಪುಸ್ತಕವನ್ನು ಶಾಸಕರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮುಡಾ ಸದಸ್ಯರಾದ ಚಂದ್ರಶೇಖರ್, ಪ್ರಮುಖರಾದ ಜಗದೀಶ್, ಸದಾ ಮುದ್ದಪ್ಪ, ಟಿ.ಪಿ.ರಮೇಶ್, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಎ.ಜೆ.ಲೋಕೇಶ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್, ವಿವಿಧ ವಿಭಾಗದ ವೈದ್ಯಕೀಯ ಮುಖ್ಯಸ್ಥರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net