ಕೊಡಗಿನ ಸಂಸ್ಕೃತಿ ಎಲ್ಲರಿಗೂ ಪರಿಚಯವಾಗಲಿ

3.npk..3
ಮೈಸೂರು ಕೊಡು ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಆಟಿ ಗೌಜಿ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಕುಯ್ಯುಮುಡಿ ರಾಮಪ್ಪ, ಹಾಗೂ ನಡುಮನೆ ರುಕ್ಮಿಣಿ ಕಾರ್ಯಕ್ರಮ ಉದ್ಘಾಟಿಸಿದರು.
Published on

ನಾಪೋಕ್ಲು: ತಮ್ಮದೇ ಸಂಸ್ಕೃತಿ ಸಂಪ್ರದಾಯವನ್ನು ಹೊಂದಿರುವ ಕೊಡಗು ಗೌಡ ಸಮುದಾಯದವರು ತಮ್ಮ ಶ್ರೇಷ್ಠ ಸಂಸ್ಕೃತಿ ಪರಂಪರೆಯನ್ನು ಸಾರ್ವಜನಿಕ ಸಮಾರಂಭಗಳ ಮೂಲಕ ಇತರರಿಗೂ ಪಸರಿಸುವ ಪ್ರಯತ್ನ ಮಾಡಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರು ಆದ ಕೆ.ವಿ.ಶ್ರೀಧರ್ ಅಭಿಪ್ರಾಯಪಟ್ಟರು.

ಆಟಿ 18ರ ಪ್ರಯುಕ್ತ ಮೈಸೂರು ಕೊಡವ ಗೌಡ ಸಮಾಜದಲ್ಲಿ ಭಾನುವಾರ ಏರ್ಪಡಿಸಿದ್ದ ಆಟಿ ಗೌಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೊಡಗು ಗೌಡರ ಶ್ರೇಷ್ಠ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಕ್ರಮಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ತಮ್ಮ ಸಂಸ್ಕೃತಿ ಇತರರಿಗೂ ಹಂಚಿಕೆಯಾಗಿ ಅದು ಶಾಶ್ವತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕೊಡುಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಮಾತನಾಡಿ, ಕೊಡಗಿನಲ್ಲಿ ಮಳೆಗಾಲದ ವಾತಾವರಣದಲ್ಲಿ ಪರಿಸರದಲ್ಲಿ ಸಿಗುವ ಆಹಾರ ಉತ್ಪನ್ನಗಳನ್ನು ಬಳಸಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಮೈಸೂರಿನಲ್ಲಿ ನೆಲೆಸಿರುವ ನಮ್ಮ ಸಮುದಾಯದ ಜನರಿಗೆ ಈ ಆರೋಗ್ಯದಾಯಕ ಆಹಾರ ಒದಗಿಸುವ ಉದ್ದೇಶದಿಂದ ಆಟಿ ಗೌಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೊಡಗು ಗೌಡ ಮಹಿಳಾ ಒಕ್ಕೂಟದ ನಡುಬೆಟ್ಟಿ ಗೀತಾ ಲಕ್ಷ್ಮಣ ಮಾತನಾಡಿ, ಆಟಿ ಗೌಜಿ ಕಾರ್ಯಕ್ರಮದ ಪ್ರಯುಕ್ತ ವಿವಿಧ ಮಳಿಗೆಗಳಲ್ಲಿ ವಿವಿಧ ಆರೋಗ್ಯದಾಯಕ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದ್ದು, ಸಮುದಾಯದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಮಾಜದ ಹಿರಿಯರಾದ ಕುಯ್ಯುಮುಡಿ ರಾಮಪ್ಪ ಹಾಗೂ ನಡುಮನೆ ರುಕ್ಮಿಣಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೆಟಿ ನಂದ ಹಾಗೂ ಕೊಡಗು ಗೌಡ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕುಂಟುಪಣಿ ಶೀಲಾ ಉಪಸ್ಥಿತರಿದ್ದರು.

ಆಹಾರ ಪದಾರ್ಥಗಳ ಪ್ರದರ್ಶನ:  ಆಟಿ ಗೌಜಿ ಕಾರ್ಯಕ್ರಮದ ಪ್ರಯುಕ್ತ 18 ಮಳಿಗೆಗಳಲ್ಲಿ ವಿವಿಧ ಬಗೆಯ ಕೊಡಗಿನ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿತ್ತು. ಆಟಿ-ಪಾಯಸ, ಪತ್ರೊಡೆ, ಕೂಗಲೆ ಹಿಟ್ಟು, ಸೂಸಲೇ ಹಿಟ್ಟು, ಎಳ್ಳು ಮೆಂತೆ ಮೊದಲಾದ ಪದಾರ್ಥಗಳು ಬಹುಬೇಗನೆ ಮಾರಾಟವಾದವು. ಕೊಡಗಿನ ವಿಶೇಷ ಮಾಂಸಾಹಾರವು ಬಹು ಬೇಡಿಕೆ ಗಳಿಸಿತು. ಪ್ರದರ್ಶನ ಆರಂಭವಾದ ಒಂದು ಗಂಟೆಯೊಳಗೆ ಬಹುತೇಕ ಆಹಾರ ಪದಾರ್ಥ ಖಾಲಿಯಾಗಿ, ಮಳಿಗೆದಾರರು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭ ಕೊಡಗು ಗೌಡ ಯುವ ವೇದಿಕೆಯವರು, ಸಮುದಾಯದ ಜನರು ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ಪರಿಕರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಈ ಪರಿಕರಗಳನ್ನು ವೀಕ್ಷಿಸುತ್ತ ತಮಗಿಷ್ಟ ಬಂದ ಆಹಾರಗಳನ್ನು ಸೇವಿಸುವುದರೊಂದಿಗೆ, ಮನೆಗೂ ಪಾರ್ಸೆಲ್ ಕಟ್ಟಿಸಿಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net