ಪ್ರತಿಯೊಬ್ಬರೂ ಆರೋಗ್ಯಕ್ಕೆ ಒತ್ತು ನೀಡಲಿ

BLY-13-5
ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಜಿಲ್ಲಾಸ್ಪತ್ರೆ ಆವರಣದ ಡಿ.ಎನ್.ಬಿ ಹಾಲ್ನಲ್ಲಿ ಬುಧವಾರ ಏರ್ಪಡಿಸಿದ್ದ ‘ಆಯುಷ್ಮಾನ್‌ಭವ’ ಅಭಿಯಾನಕ್ಕೆ ಪಾಲಿಕೆ ಉಪ ಮೇಯರ್ ಬಿ.ಜಾನಕಿ ಚಾಲನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಮತ್ತಿತರರಿದ್ದರು.
Published on

ಬಳ್ಳಾರಿ : ಆರೋಗ್ಯ ಎಲ್ಲರಿಗೂ ಪ್ರಮುಖವಾದುದು. ಪ್ರತಿ ಉದ್ದೇಶಿತ ಫಲಾನುಭವಿಗೂ ಆರೋಗ್ಯ ಯೋಜನೆಗಳನ್ನು ತಲುಪಿಸುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಜಿಲ್ಲಾಸ್ಪತ್ರೆ ಆವರಣದ ಡಿ.ಎನ್.ಬಿ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಆಯುಷ್ಮಾನ್‌ಭವ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಆರೋಗ್ಯ ಕುರಿತಾಗಿ ಜಾಗೃತಿ ಹೊಂದಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಸೇವೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ‘ಆಯುಷ್ಮಾನ್‌ಭವ’ ಸಾರ್ವಜನಿಕ ಆರೋಗ್ಯ ಅಭಿಯಾನವಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಜನರಿಗಾಗಿ ಸೆ.17 ರಿಂದ ಈ ಅಭಿಯಾನ ಆರಂಭವಾಗಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆ.17 ರಿಂದ ಪ್ರತಿ ಮಂಗಳವಾರ ಆರೋಗ್ಯ ತಪಾಸಣೆ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡು ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಬಾಯಿ, ಸ್ತನ, ಗರ್ಭಕೋಶದ ಕ್ಯಾನ್ಸರ್‌ಗಳ ತಪಾಸಣೆಗೆ ಒತ್ತು ನೀಡಲಾಗುವುದು. ಇಲ್ಲಿಯವರೆಗೆ 17,92,727 ಜನರ ನೋಂದಣಿ ಮಾಡಿಸಲಾಗಿದ್ದು, ಅವರಲ್ಲಿ 30 ವರ್ಷ ಮೇಲ್ಪಟ್ಟ 6,70,047 ಮಹಿಳೆಯರನ್ನು ತಪಾಸಣೆ ಮಾಡಲಾಗಿದೆ. ಅಲ್ಲದೆ ಕ್ಷಯರೋಗಿಗಳಿಗೆ ಚಿಕಿತ್ಸೆಯನ್ನು ಸಂಪೂರ್ಣವಾಗಿ ಒದಗಿಸುವ ಖಾತ್ರಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ಮಾನ್ ಕಾರ್ಡ್, ಎಬಿ-ಪಿಎಂಜೆಎವೈ-ಆರ್‌ಕೆ ಕಾರ್ಡ್‌ಗಳ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ವೆಚ್ಚವನ್ನು ಸುಸಜ್ಜಿತ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ನೀಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ ಗ್ರಾಮ್-ಒನ್ ಹಾಗೂ ವಿವಿಧ ಸೇವಾ ಕೇಂದ್ರಗಳ ಮೂಲಕ 4,85,395 ಜನರ ನೋಂದಣಿ ಮಾಡಿಸಲಾಗಿದೆ ಎಂದು ತಿಳಿಸಿದರು.

ಅಭಾ ಕಾರ್ಡ್ ಡಿಜಿಟಲ್ ಆರೋಗ್ಯ ದಾಖಲೀಕರಣ ಅಕೌಂಟ್ ಮೂಲಕ ಒಮ್ಮೆ ತಮ್ಮ ಹೆಸರಿನ ನೋಂದಣಿ ಮಾಡಿಸಿದಲ್ಲಿ ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆಗೆ ತೆರಳಿದರೂ ಸಹ ಆರೋಗ್ಯದ ಮಾಹಿತಿ ಲಭ್ಯವಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 7,32,102 ಜನರ ನೋಂದಣಿ ಮಾಡಿಸಲಾಗಿದೆ. ಪ್ರಸ್ತುತ ಅಭಿಯಾನದಲ್ಲಿ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಆರ್.ಅನಿಲ್ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್, ಡಾ.ಗುರುನಾಥ್ ಚವ್ಹಾಣ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಾ ಕುಮಾರಿ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net