ಕಣ್ಣಿನ ಆರೋಗ್ಯದತ್ತ ಎಲ್ಲರೂ ಗಮನಹರಿಸಲಿ

Oplus_16908288
ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಡಾ.ಅಗರ್ವಾಲ್ಸ್ ಕ್ಲಿನಿಕ್ ಸಿಬ್ಬಂದಿ ಪಾಲ್ಗೊಂಡಿದ್ದರು.
Published on

ವಿರಾಜಪೇಟೆ: ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯದತ್ತ ಗಮನಹರಿಸಬೇಕೆಂದು ಇಲ್ಲಿನ ಸೇಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ಸಲಹೆ ನೀಡಿದರು.

ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ವಿರಾಜಪೇಟೆಯ ಡಾ.ಅಗರ್ವಾಲ್ಸ್ ಕ್ಲಿನಿಕ್ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಣ್ಣು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ಜೀವನದುದ್ದಕ್ಕೂ ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಕಣ್ಣುಗಳ ರಕ್ಷಣೆಗಾಗಿ ನಿಗದಿತ ಸಮಯದಲ್ಲಿ ತಜ್ಞ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿದರೆ ಕಣ್ಣಿನ ರಕ್ಷಣೆ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗದೆ ಈ ಹಂತದಿಂದಲೇ ಕಣ್ಣಿನ ಆರೋಗ್ಯದ ಕಡೆಗೆ ಜಾಗೃತಿ ವಹಿಸಬೇಕು ಎಂದರು.

ಪದವಿ ಕಾಲೇಜು ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಮಾತನಾಡಿ, ಆರೋಗ್ಯದ ಜಾಗೃತಿ ಪ್ರತಿಯೊಬ್ಬರಲ್ಲೂ ಇರಬೇಕು. ಅಂತೆಯೇ ಕಣ್ಣುಗಳ ಆರೋಗ್ಯದ ಬಗ್ಗೆಯೂ ವಿದ್ಯಾರ್ಥಿಗಳು ತಾವು ಜಾಗೃತರಾಗುವುದರ ಜತೆಗೆ ಸಮಾಜವನ್ನು ಜಾಗೃತಗೊಳಿಸಿ ಎಂದರು.

ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮಾ, ಡಾ.ಅಗರ್ವಾಲ್ಸ್ ಕ್ಲಿನಿಕ್ ವ್ಯವಸ್ಥಾಪಕ ಅರ್ಜುನ್ ದೇವಯ್ಯ, ಮೈಸೂರು ಡಾ.ಅಗರ್ವಾಲ್ಸ್ ಆಸ್ಪತ್ರೆಯ ಆಪ್ಟೋ ಮೆಟ್ರಿಸ್ಟ್‌ಗಳಾದ ಅನೈನಾ, ಆಲಿ ಮುಜಮಿಲ್ ಉಪಸ್ಥಿತರಿದ್ದರು.

ತಪಾಸಣೆಯ ಬಳಿಕ ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವಶ್ಯಕವಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಪದವಿ ಕಾಲೇಜಿನ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net