ಎಲ್ಲರಲ್ಲೂ ಭಾರತೀಯರೆಂಬ ಭಾವ ಮೂಡಲಿ

19 SGN 1 (GR)
Published on

ಶಿಗ್ಗಾಂವಿ(ಗ್ರಾ): ನಾಡು ಪ್ರಬುದ್ಧವಾಗಲಿ, ಸುಭಿಕ್ಷವಾಗಲಿ. ಒಳ್ಳೆಯ ಮಳೆ-ಬೆಳೆಯಾಗಿ ಬೆಳೆಗೆ ತಕ್ಕ ಮಾರುಕಟ್ಟೆ ಮೌಲ್ಯ ದೊರೆತು ದೇಶದ ರೈತನ ಜೀವನ ಉತ್ತಮವಾಗಲಿ. ಎಲ್ಲರ ವ್ಯಾಪಾರ, ಉದ್ಯೋಗಗಳ ಅಭಿವೃದ್ಧಿಯಾಗಲಿ. ನಾವೆಲ್ಲರೂ ಭಾರತೀಯರು ಅನ್ನುವಂಥ ಸಮನ್ವಯ ಭಾವ ಎಲ್ಲರಲ್ಲೂ ಬರಲಿ ಎಂದು ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬಾಡ ಗ್ರಾಮದಲ್ಲಿ ಧರ್ಮ ಸೇವಾರ್ಥಿ ವಿ.ಸಿ. ಪಾಟೀಲ ಆಯೋಜಿಸಿದ್ದ ಶ್ರೀ ಅನ್ನದಾನೇಶ್ವರಸ್ವಾಮಿ ಗದ್ದುಗೆ ಜಿಣೋದ್ಧಾರ, ಪ್ರಾಣ ಪ್ರತಿಷ್ಠಾಪನೆ, ಅಡ್ಡಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ಅಯ್ಯಾಚಾರ, ಶಿವದೀಕ್ಷಾ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಎಲ್ಲರೂ ಒಳ ಪಂಗಡಗಳನ್ನು ಮರೆಯಬೇಕು. ಜಾತಿ, ಉಪಜಾತಿಗಳನ್ನು ಮರೆಯಬೇಕು. ಸನಾತನ ಧರ್ಮ ಪರಂಪರೆಗೆ ಬಹುದೊಡ್ಡ ವಿಪತ್ತು ಬಂದಿರುವ ಹಿನ್ನೆಲೆಯಲ್ಲಿ ಎಲ್ಲರೂ ಒಂದಾಗಿ ಹಿಂದುಗಳು ನಾವೆಲ್ಲ ಒಂದು, ಭಾರತೀಯರು ಎನ್ನುವಂತಹ ಮನೋಭಾವ ಬಂದಾಗ ಮಾತ್ರ ನಮ್ಮ ಹಿಂದಿನ ಪರಂಪರೆಗೆ ಮರಳಲು ಸಾಧ್ಯ ಎಂದರು.

ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಎಲ್ಲ ಇಷ್ಟಾರ್ಥ ಈಡೇರಿಸುವಂತಹ ಶಕ್ತಿ ಲಿಂಗಕ್ಕೆ ಇರುವುದರಿಂದ ಅದನ್ನು ಇಷ್ಟಲಿಂಗ ಎಂದು ಕರೆದುಕೊಂಡು ಬಂದಿದ್ದಾರೆ. ಅಂತಹ ಲಿಂಗವನ್ನು ಗುರುವೇ ನಮಗೆ ದಯಪಾಲಿಸಿರುವುದರಿಂದ ನಾವು ಗುರುವಿನ ಬಳಿ ಹೋಗಬೇಕು. ಗುರುವಿನ ಅನುಗ್ರಹ ಪಡೆದುಕೊಳ್ಳಬೇಕು. ಆಗ ದೈವ ಸಾಕ್ಷಾತ್ಕಾರ ತನ್ನಿಂದ ತಾನೇ ಆಗುತ್ತದೆ ಎಂದರು.

ಶ್ರೀಕ್ಷೇತ್ರ ಕಾಶಿ ಜಂಗಮವಾಡಿ ಮಠದ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ನಾಡಿಗೆ ಶ್ರೇಷ್ಠ ದಾಸರಾದ ಕನಕದಾಸರನ್ನು ನೀಡಿದ್ದು ಗ್ರಾಮ ಬಾಡ ಎಂದರು.

ಶ್ರೀಕ್ಷೇತ್ರ ಕಾಶಿಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅರಳೆಲೆಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಿರೇಮಣಕಟ್ಟಿಯ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು, ಹೋತನಹಳ್ಳಿ ಸಿಂಧಗಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು, ಹಿರೇಬೆಂಡಿಗೇರಿಯ ಶ್ರೀ ವಿಶ್ವೇಶ್ವರ ಶಿವಾಚಾರ್ಯರು, ಧರ್ಮ ಸೇವಾರ್ಥಿ ವಕೀಲ ವಿ.ಜಿ. ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಅಂದಾನಿಸ್ವಾಮಿ ಪಾಟೀಲ, ಎನ್.ಎಂ. ವೆಂಕೋಜಿ, ಸಿದ್ದಪ್ಪ ಚನ್ನಪ್ಪನವರ, ಗುರುನಗೌಡ ಪಾಟೀಲ, ಗುರುಪಾದಪ್ಪ ಕುಂದೂರ, ಮಾಲತೇಶ ಕಮ್ಮಾರ, ಚಂದ್ರಪ್ಪ ತೊಂಡೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net