ಪ್ರತಿಯೊಬ್ಬರೂ ನೈತಿಕ ಮೌಲ್ಯ ಬೆಳಸಿಕೊಳ್ಳಿ

New Law Collage New
Published on

ಹುಬ್ಬಳ್ಳಿ : ಪ್ರೌಢ ಶಾಲೆ ಹಾಗೂ ಕಾಲೇಜುಗಳು ವ್ಯಕ್ತಿತ್ವ ರೂಪಿಸುವ ವೇದಿಕೆಗಳಾಗಿವೆ. ನಮಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರತಿಯೊಬ್ಬರೂ ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಮಾಜಿ ಶಾಸಕ ಮತ್ತು ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಸಮಿತಿ ಮೇಲ್ಮನೆ ಅಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರದಿಂದ ಆಯೋಜಿಸಿರುವ 5 ದಿನಗಳ ಎನ್​ಎಸ್​ಎಸ್ ಅಧಿಕಾರಿಗಳ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿಸ್ವಾರ್ಥ ಬದುಕು ರೂಢಿಸಿಕೊಳ್ಳಬೇಕಿದೆ. ಅವಿಭಕ್ತ ಕುಟುಂಬಗಳು ಇಂದು ಹಳ್ಳಿಗಳ್ಳಲ್ಲೂ ಸಹ ಕಡಿಮೆಯಾಗಿವೆ. ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅವಕಾಶಗಳು ದೊರೆತಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರು ಜವಾಬ್ದಾರಿ ಸ್ಥಾನದಲ್ಲಿದ್ದು, ವಿದ್ಯಾರ್ಥಿಗಳಲ್ಲಿ ಬದಲಾವಣೆ ತರಬೇಕಾಗಿದೆ. ಸಮಾಜವನ್ನು ಸುಧಾರಿಸುವ ಕೆಲಸಗಳಾಗಬೇಕು ಎಂದು ಹೇಳಿದರು.

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್​ಎಸ್​ಎಸ್ ಕೋಶದ ಅಧಿಕಾರಿ ಪ್ರತಾಪ ಲಿಂಗಯ್ಯ ಮಾತನಾಡಿ, ಈಗಾಗಲೇ ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ತರಬೇತಿ ಆಯೋಜನೆ ಮಾಡಲಾಗಿದೆ. 350ಕ್ಕೂ ಅಧಿಕ ಎನ್​ಎಸ್​ಎಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಪ್ರೊ. ಜಿ.ಬಿ. ಶಿವರಾಜು ಮಾತನಾಡಿ, ಜೀವನ ಮೌಲ್ಯ, ಪ್ರಾಮಾಣಿಕತೆ ಬೆಳೆಸಿಕೊಳ್ಳಲು ಎನ್​ಎಸ್​ಎಸ್ ನೆರವಾಗುತ್ತದೆ. ಪರೋಪಕಾರ ಜೀವನ ಅಳವಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಹೊಂದಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಪ್ರತಿಯೊಬ್ಬರೂ ಸೇವಾ ಮನೋಭಾವ ಅರಿತುಕೊಳ್ಳಬೇಕು. ಸಮಾಜ ಪರಿವರ್ತಿಸಲು ಮುಂದಾಗಬೇಕು. ಸಾಮಾಜಿಕ, ಧಾರ್ವಿುಕ, ಸಾಂಸ್ಕೃತಿಕ, ರಾಜಕೀಯ ಬದಲಾವಣೆೆಗಳಿಂದ ಮಾನವನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ನಿಯಂತ್ರಿಸಬೇಕು. ಸಮಾಜದಲ್ಲಿ ಮೇಲು, ಕೀಳು ಭಾವನೆಯಿಂದ ಹೊರಬರಬೇಕಿದೆ ಎಂದು ಹೇಳಿದರು.

ಮಹಾತ್ಮಾ ಗಾಂಧೀಜಿ ಕುರಿತಾದ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಿಂಡಿಕೇಟ್ ಸದಸ್ಯ ಎಸ್.ಎನ್. ಪರಾಂಡೆ, ಕುಲಸಚಿವೆ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಕೆಎಸ್​ಎಲ್​ಯುು ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಐ.ಬಿ. ಬಿರಾದಾರ, ಪ್ರಶಾಂತ ಎಡ್ರಾಮಿಮಠ ಹಾಗೂ ಇತರರು ಇದ್ದರು.

ಸಿಂಚನಾ ಪರಿಚಯಿಸಿದರು. ಐಶ್ವರ್ಯ ಭಟ ನಿರೂಪಿಸಿದರು. ಆದ್ವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net