ಪ್ರತಿಯೊಬ್ಬರೂ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ

10 HNP 2
ಹೊಳೆನರಸೀಪುರ ತಾಲೂಕಿನ ಕಂದಲಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
Published on

ಹೊಳೆನರಸೀಪುರ: ಆಧುನಿಕ ಯುಗದಲ್ಲಿ ಬದುಕುತ್ತಿರುವ ನಾವು ಎಲ್ಲ ಕ್ಷೇತ್ರಗಳ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ. ಈ ಮೂಲಕ ಸೋಲು ಮತ್ತು ಗೆಲುವಿನ ಅನುಭವವನ್ನು ಪಡೆಯಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ.ಬಸವರಾಜು ಹೇಳಿದರು.

ಭಾನುವಾರ ತಾಲೂಕಿನ ಕಂದಲಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಫೆಬ್ರವರಿಯಲ್ಲಿ ಹಮ್ಮಿಕೊಂಡಿದ್ದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಶ್ನಿಸುವ ಮೂಲಕ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಸಂಶೋಧನೆ ಹಾದಿ ಹಿಡಿದು ಸಾಗಬೇಕು. ಆಗ ಜಗತ್ತಿಗೆ ಅಗತ್ಯವಾದ ವಿನೂತನವಾದ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಕ ಕೆ.ಎನ್.ಚಿದಾನಂದ ಮಾತನಾಡಿ, ಜ್ಞಾನದ ಕ್ರಮಬದ್ಧವಾದ ಅಧ್ಯಯನವೇ ವಿಜ್ಞಾನ. ವಿಜ್ಞಾನ ವಿಶ್ವದ ಸರ್ವ ಶ್ರೇಷ್ಠ ಜ್ಞಾನಾಂಶಗಳ ಗುಚ್ಛವಾಗಿದೆ. ಅಸಂಖ್ಯಾತ ವಿಸ್ಮಯಗಳ ಲೋಕವೂ ವಿಜ್ಞಾನವೇ ಆಗಿದೆ. ಪೂರ್ವಾಗ್ರಹ ಪೀಡಿತ ಭಾವನೆಗಳಿಂದ ವಿಜ್ಞಾನ ದೂರವಿರುತ್ತದೆ. ಅನ್ವೇಷಣಾ ಮನೋಭಾವ ಬೆಳೆಸುವ ಮೂಲಕ ಸತ್ಯಾಸತ್ಯತೆಗಳ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ. ವಿಜ್ಞಾನವು ನಿಖರತೆ, ನಿರ್ದಿಷ್ಟತೆ ಮತ್ತು ಸ್ಪಷ್ಟತೆಗಳನ್ನು ಮೈಗೂಡಿಸಿಕೊಂಡಿರುತ್ತದೆ ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಪ್ರಸವಿ ಮಾತನಾಡಿ, ವೈಜ್ಞಾನಿಕ ಚಿಂತನಗಳ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವ ಮೂಲಕ ಹೊಸ ಆಲೋಚನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಯಾವುದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ವಿಜ್ಞಾನವನ್ನು ಅಧ್ಯಯನ ಮಾಡುವುದರ ಜತೆಗೆ ಪ್ರಯೋಗಗಳನ್ನು ಪೂರಕವಾಗಿ ವಿಜ್ಞಾನ ಶಿಕ್ಷಕರ ನೆರವಿನೊಂದಿಗೆ ಮಾಡಿ ಸತ್ಯಾಸತ್ಯತೆ ತಿಳಿಯಬೇಕು ಹಾಗೂ ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜಯ ಶಾಲೆಯ ಒಂಭತ್ತನೇ ತರಗತಿ ತೇಜಸ್ವಿನಿ ಹಾಗೂ ದ್ವಿತೀಯ ಸ್ಥಾನ ಪಡೆದ ಪ್ರಿಯದರ್ಶಿನಿ ಶಾಲೆಯ ಪೃಥ್ವಿ ಹೆಚ್.ಟಿಗೆ ನಗದು ರೂಪದಲ್ಲಿ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಜ್ಞ್ಞಾನ ವಿಜ್ಞಾನ ಸಮಿತಿಯ ಸಂಸ್ಥಾಪನಾ ದಿನಾಚರಣೆ ಕೂಡ ಮಾಡಲಾಯಿತು. ಹೆಚ್ಚು ಹೆಚ್ಚು ಸದಸ್ಯರನ್ನು ನೋಂದಾಯಿಸುವ ಬಗ್ಗೆ ಚರ್ಚಿಸಲಾಯಿತು. ಏಪ್ರಿಲ್ 10 ರವರೆಗೂ ಸದಸ್ಯತ್ವ ಅಭಿಯಾನವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳ ಶಿಕ್ಷಕರು ಮತ್ತು ಪಾಲಕರು ಮತ್ತು ಮುರಾರ್ಜಿ ವಸತಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net