

ನಾಪೋಕ್ಲು: ನಾಪೋಕ್ಲು ನಾಡು ಗ್ರಾಹಕರ ಸಂಘವು ಸುಸಜ್ಜಿತವಾದ ಕಟ್ಟಡ ಹೊಂದಿದ್ದು ಸಂಘದ ಮಳಿಗೆಯಲ್ಲಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ತಿಳಿಸಿದರು.
ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಂಘದಲ್ಲಿ 639 ಸದಸ್ಯರಿದ್ದು ದುಡಿಯುವ ಬಂಡವಾಳ 56.49 ಲಕ್ಷ ರೂ.ಗಳಾಗಿವೆ. ಸಂಘವು 2023-24ನೇ ಸಾಲಿನಲ್ಲಿ 2.37 ಲಕ್ಷ ರೂ. ಲಾಭ ಗಳಿಸಿದೆ ಎಂದು ಹೇಳಿದರು.
ಸಂಘದ ಶ್ರೇಯೋಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಿ ಬಳಿಕ ಎಲ್ಲರ ಒಪ್ಪಿಗೆ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ, ನಿರ್ದೇಶಕರಾದ ಕೊಂಬಂಡ ಗಣೇಶ, ಕುಲೇಟಿರ ಅರುಣ್ ಬೇಬ, ನಾಯಕಂಡ ಮುತ್ತಪ್ಪ, ಬೊಟ್ಟೋಳಂಡ ಕುಟ್ಟಪ್ಪ, ಪಾಡಿಯಮ್ಮಡ ಮನು ಮಹೇಶ್, ಕೇಟೋಳಿರ ಮುತ್ತಮ್ಮ, ಎಚ್.ಎ.ಬೊಳ್ಳು, ಬಿ.ಆರ್. ರಾಮಣ್ಣ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಲ್ಲೇಂಗಡ ತಿಮ್ಮಯ್ಯ, ಸಿಬ್ಬಂದಿ ಮುಕ್ಕಾಟಿರ ರಾಜಪ್ಪ, ತಟ್ಟಂಡ ಮುತ್ತಪ್ಪ ಹಾಜರಿದ್ದರು.