

ಮುಂಡರಗಿ: ಸ್ವಾತಂತ್ರ್ಯ ದಿನಾಚರಣೆ ಕುರಿತು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಪೂರ್ವಭಾವಿ ಸಭೆ ಜರುಗಿತು.
ತಹಸೀಲ್ದಾರ್ ಧನಂಜಯ ಎಂ.ಮಾತನಾಡಿ, ಆ. 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಅಂದು ಬೆಳಗ್ಗೆ 7:30ಗಂಟೆಗೆ ಎಲ್ಲ ಶಾಲಾ, ಕಾಲೇಜು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. 8:30ಕ್ಕೆ ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಬೇಕು. 9ಗಂಟೆಗೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಲಾಗುತ್ತದೆ. ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಲಹೆಗಳನ್ನು ನೀಡಿದರು. ಹಾಗೆಯೆ ತಾಲೂಕು ಕ್ರೀಡಾಂಗಣಕ್ಕೆ ಜಗದ್ಗುರು ಅನ್ನದಾನೀಶ್ವರ ಮಠದಿಂದ ಭೂದಾನ ನೀಡಲಾಗಿದೆ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಜತೆಗೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮುಂದಾಗಬೇಕು. ಪ್ರೋಟೋಕಾಲ್ ನೆಪ ಹೇಳಬಾರದು ಎಂದು ಸಭೆಯಲ್ಲಿ ಅನೇಕರು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಎಂ.ಜಿ. ಗಚ್ಚಣ್ಣವರ, ಬಸವರಾಜ ನವಲಗುಂದ, ನಾಗರಾಜ ಹೊಂಬಳಗಟ್ಟಿ, ವಿ.ಎಸ್. ಗಟ್ಟಿ, ಎಸ್.ಆರ್. ಚಿಗರಿ, ಶಿವಾನಂದ ಇಟಗಿ, ಮಂಜುಳಾ ಇಟಗಿ, ಲಕ್ಷ್ಮಣ ತಗಡಿನಮನಿ, ಸಿದ್ದಪ್ಪ ಮುದ್ಲಾಪುರ, ಎಂ.ಎಚ್. ತಳಗಡೆ, ದೃವಕುಮಾರ ಹೂಗಾರ ಇತರರು ಇದ್ದರು.