

ಬನ್ನೂರು : ಕನ್ನಡ ನಾಡು, ನುಡಿ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಹೇಮಂತ್‌ರಾಜ್ ತಿಳಿಸಿದರು.
ಸೋಮವಾರ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ-50ರ ಸಂಭ್ರಮದ ಜ್ಯೋತಿ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ಮೈಸೂರು ರಾಜ್ಯ, ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ-50ರ ಸಂಭ್ರಮದ ರಥ ರಾಜ್ಯಾದ್ಯಂತ ಸಂಚಾರ ಮಾಡುತ್ತಿದೆ ತಾಯಿ ನಾಡು ಮತ್ತು ಕನ್ನಡದ ಬಗ್ಗೆ ಅಭಿಮಾನ ಹೊಂದಬೇಕು. ಭಾಷಯ ಸಂರಕ್ಷಣೆಗೆ ದುಡಿಯಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬನ್ನೂರು ವೈ.ಎಸ್. ರಾಮಸ್ವಾಮಿ ಮಾತನಾಡಿ, ಕನ್ನಡ ನಾಡಿನ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು. ನಮ್ಮ ಕಲೆ, ಸಂಸ್ಕೃತಿ ಆಚಾರ, ವಿಚಾರಗಳ ಬಗ್ಗೆ ಮುಂದಿನ ತಲೆಮಾರಿಗೆ ಪರಿಚಯ ಮಾಡಿಕೊಡಬೇಕು. ಮಕ್ಕಳಿಗೆ ಕನ್ನಡ ನೆಲ, ಜಲದ ಬಗ್ಗೆ ಸಮಗ್ರವಾದ ವಿಚಾರಗಳನ್ನು ಪ್ರಾಥಮಿಕ ಹಂತದಲ್ಲೇ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಮಾತ್ರ ಕನ್ನಡಕ್ಕೆ ನಿಜವಾದ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ- 50ರ ಸಂಭ್ರಮದ ಜ್ಯೋತಿ ರಥದ ಶ್ರೀ ಭುವನೇಶ್ವರಿ ಪುತ್ತಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಬಸವೇಶ್ವರ ವೃತ್ತದಿಂದ ಮೆರವಣಿಗೆ ನಡೆಸಲಾಯಿತು. ಪೂರ್ಣ ಕುಂಭ ಕಲಶ ಹಿಡಿದಿದ್ದ ಮಹಿಳೆಯರು, ಶಾಲಾ ಮಕ್ಕಳು, ಶಿಕ್ಷಕರು ಗಮನಸೆಳೆದರು. ಶಾಲಾ ಮಕ್ಕಳ ಬ್ಯಾಂಡ್‌ಸೆಟ್ ಹುಮ್ಮಸ್ಸು ನೀಡಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಕಾರ್ಯದರ್ಶಿ ಶಿವಶಂಕರ್‌ಮೂರ್ತಿ, ಹೋಬಳಿ ಅಧ್ಯಕ್ಷ ಪುಟ್ಟರಾಜು, ಉಪಾಧ್ಯಕ್ಷ ಸುಬ್ರಹ್ಮಣ್ಯ, ರಾಮಚಂದ್ರ, ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಮಹಿಳಾ ಅಧ್ಯಕ್ಷೆ ಮಂಜುಳಾ, ಸಿಆರ್‌ಪಿ ಬೋರೇಗೌಡ, ಹಿಂದಿ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಸಿದ್ದೇಗೌಡ, ನಾರಾಯಣ್, ಕಾಂತರಾಜ್, ಪರಿಸರ ಇಂಜಿನಿಯರ್ ನಸೀಮ ಅಜುಂ, ವಿನುತಾ, ಸೋಮಪ್ರಭಾ, ಪುಷ್ಪಲತಾ, ಅರುಣ್, ಹರಿಪ್ರಸಾದ್, ಬಿ.ಡಿ.ಪ್ರೇಮಾ, ಸಮುದಾಯ ಸಂಘಟಕ ಕುಮಾರ್, ಲತಾ, ಹರೀಶ್, ರಾಮಕೃಷ್ಣ, ಸೋಮಶೇಖರ್, ನಾಗೇಂದ್ರ, ಪುಟ್ಟಸ್ವಾಮಿ ಇತರರು ಇದ್ದರು.
ಪಟೂರು ನಂಜುಂಡಪ್ಪ, ರಾಜೇಶ್, ಕಾಲಚರಣ್, ಲಕ್ಷಣ್, ನಾಗೇಶ್, ರಾಧಿಕಾ, ವಾಸು, ಸಿದ್ದೇಗೌಡ, ನಟರಾಜು ಇತರರು ಇದ್ದರು.