ಪ್ರತಿಯೊಬ್ಬರೂ ಪರಿಶುದ್ಧ ಕಾಯಕ ಮಾಡಲಿ

3
ದರೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವೇದಾಂತ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸತ್ಕರಿಸಲಾಯಿತು. ಅಭಿನವ ಸಿದ್ಧಾರೂಢ ಸ್ವಾಮೀಜಿ, ಮಾತೋಶ್ರೀ ಶ್ರೀದೇವಿ ತಾಯಿ, ಪರಪ್ಪ ಸವದಿ, ಸುರೇಶ ಮಾಯಣ್ಣವರ ಇತರರಿದ್ದರು.
Published on

ಅಥಣಿ ಗ್ರಾಮೀಣ: ಜೀವನದಲ್ಲಿ ಪ್ರಾಮಾಣಿಕತೆಯಿಂದ ಪರಿಶುದ್ಧ ಕಾಯಕ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ದರೂರ ಗ್ರಾಮದ ಶ್ರೀ ಜಕ್ಕಮ್ಮದೇವಿ ಹಾಗೂ ಧರಿದೇವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವೇದಾಂತ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುತ್ತಿದ್ದಾರೆ, ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಒಳ್ಳೆಯ ಜೀವನ ಸಾಗಿಸಬೇಕು. ಸಂಸ್ಕೃತಿ ಉಳಿಸುವಲ್ಲಿ ಗ್ರಾಮೀಣ ಪ್ರದೇಶಗಳ ಜಾತ್ರೆ, ಉತ್ಸವಗಳು ಸಹಕಾರಿಯಾಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಸಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಜಮಖಂಡಿಯ ಮಾತೋಶ್ರೀ ಶ್ರೀದೇವಿ ತಾಯಿ ಮಾತನಾಡಿ, ಶರಣರ ಸಂದೇಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬೆಳಗ್ಗೆ ಜಕ್ಕವ್ವದೇವಿ ಹಾಗೂ ಧರಿದೇವರ ಗದ್ದುಗೆಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರೆಯಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.

ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಸುರೇಶ ಮಾಯಣ್ಣವರ, ಡಿವೈಎಸ್ಪಿ ಬಿ.ಎಸ್.ಲೋಕಾಪುರ, ಪ್ರದೀಪ ನಂದಗಾವ, ಡಾ.ಧರೆಪ್ಪ ಚೌಗಲಾ, ಧರೆಪ್ಪ ಬಸಗೌಡರ, ದುಂಡಪ್ಪ ಅಸ್ಕಿ, ಸಂಜೀವ ಅವಕನವರ, ಶ್ರೀಕಾಂತ ಅಸ್ಕಿ, ಸಿದ್ಧಪ್ಪ ಗುಮತಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net