ಪ್ರತಿ ಮನೆಯಲ್ಲೂ ಹಸು ಸಾಕುವ ಕೆಲಸವಾಗಲಿ

tarabeti
Published on

ಸಿದ್ದಾಪುರ: ಹೈನುಗಾರಿಕೆಯಿಂದ ಲಾಭವಿಲ್ಲ ಎಂಬ ಮನೋಭಾವದಿಂದ ರೈತರು ಹೊರಬರಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಲಹೆ ನೀಡಿದರು.

ಪಟ್ಟಣದಲ್ಲಿ ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ ವಿಸ್ತರಣಾ ಕಾರ್ಯಕ್ರಮದಡಿ ರೈತರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಪ್ರತಿ ಮನೆಯಲ್ಲೂ ಹಸುವನ್ನು ಸಾಕುವ ಕೆಲಸವಾಗಬೇಕು. ಆದಾಯ ಹೆಚ್ಚಬೇಕು ಎಂಬ ಉದ್ದೇಶದಿಂದ ರಾಸಾಯನಿಕ ಬಳಕೆ ಹೆಚ್ಚಾಗುತ್ತಿದೆ. ಸರ್ಕಾರ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ಹಾಲಿನ ದರ ಹೆಚ್ಚು ನೀಡಿ ಪ್ರೋತ್ಸಾಹಿಸಬೇಕು. ಪಶು ಸಖಿಯರು ಜನರ ಮನವೊಲಿಸಿ ಪ್ರತಿ ಮನೆಯಲ್ಲಿ ಆಕಳು ಕಟ್ಟುವಂತ ಕಾರ್ಯವಾಗಬೇಕು. ವೈದ್ಯರು ಹಾಗೂ ಸಿಬ್ಬಂದಿ ಕೂಡ ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಮಾತನಾಡಿ, ಹೈನುಗಾರಿಕೆ ಕುರಿತು ಅನೇಕರಲ್ಲಿ ಇರುವ ತಪ್ಪು ತಿಳಿವಳಿಕೆಯಿಂದ ಹೊರ ಬಂದು ಪಶು ಸಂಗೋಪನೆಯಲ್ಲಿ ಹೆಚ್ಚು ತೊಡಗಿ ಎಂದರು.

ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ವಸಂತ ನಾಯ್ಕ ಮನಮನೆ, ವಿ.ಎನ್.ನಾಯ್ಕ, ಸಂಪನ್ಮೂಲ ವ್ಯಕ್ತಿ ರವೀಂದ್ರ ಹೊಂಡಗಾಸಿ ಉಪಸ್ಥಿತರಿದ್ದರು. ಇಲಾಖೆಯ ಮುಖ್ಯ ವೈದ್ಯಾಧಿಕಾರಿ ವಿವೇಕಾನಂದ ಹೆಗಡೆ ಸ್ವಾಗತಿಸಿದರು.

ಆರ್ಥಿಕ ಸಹಕಾರ

ಮನೆಗೆ ಸಿಡಿಲು ಬಡಿದು ಅಸ್ವಸ್ಥಗೊಂಡು ಚೇತರಿಸಿಕೊಂಡ ಸಿದ್ದಾಪುರ ತಾಲೂಕಿನ ಗಾಳಿಜಡ್ಡಿಯ ಚನ್ನಯ್ಯ ಅವರ ಮನೆಗೆ ಶಾಸಕ ಭೀಮಣ್ಣ ನಾಯ್ಕ ಅವರು ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ಸಹಕಾರ ನೀಡಿದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಹಾರ್ಸಿಕಟ್ಟಾ ಗ್ರಾಪಂ ಸದಸ್ಯ ಅಶೋಕ ನಾಯ್ಕ, ಶಾಂತಕುಮಾರ ಗೌಡರ್, ನೂರ‌್ಲಾಮಿನ್ ಸಾಬ್ ಹಾರ್ಸಿಕಟ್ಟಾ, ಸಿ.ಆರ್.ನಾಯ್ಕ, ಬಾಲಕೃಷ್ಣ ಕೋಲಸಿರ್ಸಿ, ಕಂದಾಯ ಇಲಾಖೆ ಅಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net