ಈಶ್ವರಪ್ಪಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ ಸಿಗಲಿ; ಶ್ರೀ ಕಾಶಿ ಜಗದ್ಗುರುಗಳ ಸಲಹೆ

kse home visit kashi sree
ಶಿವಮೊಗ್ಗದ ನಿವಾಸದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಕುಟುಂಬವು ಕಾಶಿ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಪಾದಪೂಜೆ ನೆರವೇರಿಸಿತು.
Published on

ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಿಜೆಪಿಯಲ್ಲಿದ್ದುಕೊಂಡು ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉನ್ನತ ಜವಾಬ್ದಾರಿ ನೀಡಬೇಕು. ಆ ಮೂಲಕ ಅವರನ್ನು ಗೌರವಿಸುವ ಜತೆಗೆ ದೇಶಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ವಾರಾಣಸಿ ಜಂಗಮವಾಡಿ ಮಠದ ಕಾಶಿ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಲಹೆ ನೀಡಿದರು.

ನಗರದಲ್ಲಿರುವ ಈಶ್ವರಪ್ಪ ಮನೆಗೆ ಶನಿವಾರ ಭೇಟಿ ನೀಡಿ ಆಶೀರ್ವದಿಸಿ ಮಾತನಾಡಿದ ಶ್ರೀಗಳು, ಈಶ್ವರಪ್ಪ ತಾವಾಗಿಯೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಪಕ್ಷ ಅವರನ್ನು ಎಂದಿಗೂ ಕೈಬಿಡದೆ ಉನ್ನತ ಹುದ್ದೆ ಕೊಡಬೇಕು. ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಈಶ್ವರಪ್ಪಗೆ ಜಗದ್ಗುರು ಕರುಣಿಸುತ್ತಾನೆ ಎಂದರು.
ಈಶ್ವರಪ್ಪ ಅತ್ಯಂತ ಶ್ರದ್ಧಾನ್ವಿತ ವ್ಯಕ್ತಿತ್ವ ಹೊಂದಿದ್ದಾರೆ. ರಾಜಕಾರಣದಲ್ಲಿದ್ದರೂ ಧರ್ಮವನ್ನು ಜತೆ ಜತೆಯಲ್ಲೇ ಕಾಪಾಡಿಕೊಂಡು ಬಂದವರು. ಧರ್ಮ, ದೇವರು, ಗುರುಗಳಲ್ಲಿ ಅತ್ಯಂತ ನಿಷ್ಠೆ ಹೊಂದಿದ ಅಪರೂಪದ ರಾಜಕಾರಣಿ. ನಾವಾಗಿಯೇ ಇಲ್ಲಿಗೆ ಬಂದು ಆಶೀರ್ವದಿಸಿದ್ದೇವೆ. ಇದು ಅವರಿಗೆ ಸಿಕ್ಕಂತಹ ಯೋಗಾಯೋಗ. ಅವರು ಮಾಡಿರುವ ಪುಣ್ಯದ ಫಲವಿದು. ಮುಂದಿನ ಅವರ ಶತಾದ್ಯಮಹೋತ್ಸವದಲ್ಲೂ ಪಾಲ್ಗೊಳ್ಳುವ ಇಚ್ಛೆಯಿದೆ ಎಂದು ತಿಳಿಸಿದರು.
ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವೆ:
ಇಂಥದ್ದೇ ಜವಾಬ್ದಾರಿ ಬೇಕು ಎಂದೇನಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುವೆ. ಜವಾಬ್ದಾರಿ ಕೊಡದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ. ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರ ಜತೆ ನಾನೂ ಒಬ್ಬ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಶ್ವಕ್ಕೆ ಕಾಶಿ ಶ್ರದ್ಧಾಕೇಂದ್ರವಾಗಿದೆ. ಯಾವ ಜನ್ಮದ ಪುಣ್ಯಫಲವೋ ಗೊತ್ತಿಲ್ಲ. ಇತ್ತೀಚೆಗೆ ಕಾಶಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಕಾಶಿ ಜಗದ್ಗುರು ಆಶೀರ್ವಾದ ಸಿಕ್ಕಿರುವುದು ನನ್ನ ಪುಣ್ಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ರಾಜ್ಯ ಮತ್ತು ದೇಶದ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿದೆ. 75ನೇ ಜನ್ಮದಿನ ಹಿನ್ನೆಲೆಯಲ್ಲಿ ಹಿತೈಷಿಗಳು, ಹಿರಿಯರು ಆಶೀರ್ವಾದ ಮಾಡಿರುವುದು ನನ್ನ ಭಾಗ್ಯ. ಕಾಶಿ ಜಗದ್ಗುರುಗಳು ಅವರಾಗಿಯೇ ನಮ್ಮ ಮನೆಗೆ ಬಂದಿ ಆಶೀರ್ವಾದ ಮಾಡಿರುವುದು ಮುಂದೆ ಸಮಾಜ, ದೇಶ, ಧರ್ಮದ ಸೇವೆ ಮಾಡುವುದಕ್ಕೆ ಸ್ಫೂರ್ತಿ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net