ಪರಿಸರ ರಕ್ಷಣೆ ನಿರಂತರವಾಗಿರಲಿ

Environment
Published on

ಧಾರವಾಡ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಪರಿಸರ ದಿನ ಸಂದರ್ಭದಲ್ಲಿ ರಕ್ಷಣೆ ಬಗ್ಗೆ ಮಾತನಾಡಿದರೆ ಸಾಲದು. ನಿತ್ಯವೂ ಆ ಕಾರ್ಯದಲ್ಲಿ ತೊಡಗಿದಾಗಲೇ ಪರಿಸರ ರಕ್ಷಣೆ ಸಾಧ್ಯ ಎಂದು ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯ ವಸಂತ ಅರ್ಕಾಚಾರ ಹೇಳಿದರು.

ನಗರದ ಅಕ್ಕಮಹಾದೇವಿ ಆಶ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಡಿಯಿಂದ ಮುಡಿಯವರೆಗೆ ಪರಿಸರ ಜಾಗೃತಿ ಆಗಬೇಕು. ಪ್ರಸ್ತುತ ಪರಿಸರಕ್ಕೆ ಮಾರಕವಾದ ಅತಿಯಾದ ವಾಹನಗಳ ಸಂಚಾರದಿಂದ ವಾಯುಮಾಲಿನ್ಯ ನಿಯಂತ್ರಣಗೊಳ್ಳುತ್ತಿಲ್ಲ. ಹೆಚ್ಚು ಅವಲಂಬಿತ ಪ್ಲಾಸ್ಟಿಕ್ ಬಳಕೆ ಮತ್ತು ಕೆರೆಗಳ ಅತಿಕ್ರಮಣ, ಗಿಡಗಳ ಮಾರಣ ಹೋಮ, ನಗರಗಳ ಸೌಂದಯೀಕರಣ, ಸ್ವಚ್ಛತೆಗೆ ಆದ್ಯತೆ, ಹೀಗೆ ಅನೇಕ ರೀತಿ ಪರಿಸರಕ್ಕೆ ಹಾನಿ ಮಾಡಲಾಗುವ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಇವೆಲ್ಲವನ್ನು ಮೆಟ್ಟಿ ನಿಂತು ಪರಿಸರ ರಕ್ಷಣೆ ಮಾಡಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ತಾಯಿ ಜ್ಞಾನೇಶ್ವರಿ ಅಮ್ಮನವರು ಆಶೀರ್ವಚನ ನೀಡಿ, ಮಳೆಗಾಲದಲ್ಲಿ ಮಾತ್ರ ಪರಿಸರದ ಬಗ್ಗೆ ಕಾಳಜಿ ವಹಿಸದೆ, ರಕ್ಷಣೆಗೆ ಸದಾಕಾಲ ಪರಿಸರ ಜಾಗೃತಿಯಂತಹ ಸಂಘ-ಸಂಸ್ಥೆಗಳ ಮೂಲಕ ಅಭಿಯಾನ, ಹೋರಾಟ ಮತ್ತು ಶಿಬಿರಗಳನ್ನು ನಡೆಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಯೋಜನಾಧಿಕಾರಿ ಮಯೂರ ತಾಸ್ಕರ ಮಾತನಾಡಿ, ಸಸಿಗಳನ್ನು ನೆಟ್ಟರೆ ಸಾಲದು. ಅವುಗಳನ್ನು ಪೋಷಿಸುವುದು ಸಹ ಮಹತ್ವದ್ದಾಗಿದೆ ಎಂದರು.

ವಿವಿಧ ಸಂಘ-ಸಂಸ್ಥೆಗಳ ನೂರಾರು ಸದಸ್ಯರು ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿದರು. ಕುಸುಮಾ ಕಮ್ಮಾರ ಸ್ವಾಗತಿಸಿದರು. ರವಿಕುಮಾರ ನಿರೂಪಿಸಿದರು. ಸುನೀತಾ ಪವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net