

ಲಕ್ಷ್ಮೇಶ್ವರ: ಪ್ರಪಂಚದ ಎಲ್ಲ ಜೀವರಾಶಿಗಳ ರಕ್ಷಣೆ, ಪಾಲನೆ- ಪೋಷಣೆ, ಪರಿಸರ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಉದಯಕುಮಾರ ಹಂಪಣ್ಣವರ ಹೇಳಿದರು.
ಅಗಡಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ವಿಶ್ವದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಒಂದು ಸಸಿ ನೆಟ್ಟರೂ ಸಾವಿರಾರು ಸಸಿಗಳನ್ನು ಬೆಳೆಸಬಹುದು. ಪರಿಸರ ದಿನ, ವನಮಹೋತ್ಸವದಂತಹ ಕಾರ್ಯಕ್ರಮಗಳು ಆಚರಣೆಗೆ ಸೀಮಿತವಾಗದೆ ಜಾಗೃತಿಯ ಸಂಕಲ್ಪವಾಗಬೇಕು. ದೇಶದಲ್ಲಿ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಲು ಶೇ.33ರಷ್ಟು ಅರಣ್ಯ ಇರಬೇಕು. ಶಾಲಾ- ಕಾಲೇಜು ವಿದ್ಯಾರ್ಥಿಗಳು ಸರ್ಕಾರ, ಅರಣ್ಯ ಇಲಾಖೆಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು. ಈ ವೇಳೆ ಉಪಪ್ರಾಚಾರ್ಯ ಡಾ. ಪರಶುರಾಮ ಬಾರಕಿ, ಡಾ. ಎನ್. ಹಯವದನ ಸೇರಿ ಇತರರು ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟರು.