

ವಿಜಯಪುರ: ಅಂಗವಿಕಲರು ಕೂಡ ಸಾಮಾನ್ಯರಂತೆ ಬದುಕುವ ಬಯಕೆಯಿರುತ್ತದೆ ಎಂಬುದನ್ನು ಸಮಾಜದ ಇತರರು ಅರಿತು ಅವರ ಬೆಳವಣಿಗೆಗೆ ಸಹಕರಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಿಶೇಷಚೇತನರ ಸಬಲೀಕರಣಕ್ಕಾಗಿ ಉಚಿತ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ಸಂಸದ ರಮೇಶ ಜಿಗಜೀಣಗಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಕೇಂದ್ರ ಸರ್ಕಾರ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ, ಅಲಿಂಕೋ, ಜಿಲ್ಲಾಡಳಿತ, ಜಿ.ಪಂ.ಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಶೇಷಚೇತನ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಿಸುವ ಕೇಂದ್ರ ಸರ್ಕಾರದ ಅಡಿಪ್ ಯೋಜನೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಸಾಮಾಜಿಕ ಅಧಿಕಾರಿತ ಶಿವಿರ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸುತ್ತಿದ್ದು, ಅವುಗಳನ್ನು ಪಡೆದವರು ಸಮರ್ಪಕವಾಗಿ ಉಪಯೋಗಿಸುವಂತಾಗಬೇಕು. ಅಲ್ಲದೆ, ಅಧಿಕಾರಿಗಳು ಅರ್ಹತೆ ಇದ್ದವರಿಗೆ ಮಾತ್ರ ಸಾಧನ ಸಲಕರಣಗಳು ದೊರೆಯುವಂತೆ ಕ್ರಮ ವಹಿಸಬೇಕು. ಫಲಾನುಭವಿಗಳು ಇವುಗಳ ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಕಲರಿಗಿರುವ ಸಮಸ್ಯೆಗಳನ್ನು ಗುರುತಿಸಿ ಅಗತ್ಯ ಸಾಧನ ಸಲಕರಣೆ ನೀಡುವ ಜತೆಗೆ ಮುಖ್ಯವಾಹಿನಿಗೆ ಬರಲು ಈ ಯೋಜನೆಗಳು ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಬಡ ವಿಶೇಷಚೇತನ ಮಕ್ಕಳಿಗಾಗಿ ವಿಶೇಷ ಶಾಲೆ ನಿರ್ಮಾಣದ ಹಂತದಲ್ಲಿದ್ದು, ಬರುವ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದ್ದು, ಅಲ್ಲಿ ಅಂಗವಿಕಲರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು. ಅರ್ಹರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಅಂಗವಿಕಲರ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಕಾಳೆ ಮಾತನಾಡಿದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ, ಅಲಿಂಕೋ ಡೆಪ್ಯೂಟಿ ಮ್ಯಾನೇಜರ್ ಶಿವುಕುಮಾರ ಮತ್ತಿತರರಿದ್ದರು.