

ಮೈಸೂರು: ಒಕ್ಕಲಿಗರು ಕೇವಲ ಒಕ್ಕಲುತನವನ್ನು ನಂಬಿಕೊಂಡು ಬದುಕಿದರೆ ಭವಿಷ್ಯ ಮಂಕಾಗಲಿದೆ. ಆದ್ದರಿಂದ ಉದ್ದಿಮೆದಾರರಾಗಿ ಹೊರಹೊಮ್ಮಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಒಕ್ಕಲಿಗ ಸಮುದಾಯದ ಫಸ್ಟ್ ಸರ್ಕಲ್ ಸಂಸ್ಥೆಯ ‘ಮೈಸೂರು ಸೆಂಟ್ರಲ್ ಸರ್ಕಲ್’ ಶಾಖೆ ಉದ್ಘಾಟಿಸಿ ಮಾತನಾಡಿದರು.
ಒಕ್ಕಲಿಗರ ಸಮುದಾಯದಲ್ಲಿ ಉದ್ದಿಮೆದಾರರ ಸಂಖ್ಯೆ ಕಡಿಮೆ. ಆದರೆ ಪ್ರಪಂಚ ಹೇಗೆ ಹೋಗುತ್ತದೆಯೋ ಹಾಗೆಯೇ ನಮ್ಮ ಸಮುದಾಯ ಸಹ ಸಾಗಬೇಕು. ಏಕೆಂದರೆ, ಬರೀ ಒಕ್ಕಲುತನ ಸಾಲದು. ಭೂಮಿ ಕಡಿಮೆಯಾಗಿದೆ. ಈಗಲೂ ವ್ಯವಸಾಯವನ್ನೇ ನಂಬಿದರೆ ಅಭಿವೃದ್ಧಿ ಕಷ್ಟಕರವಾಗಲಿದೆ ಎಂದರು.
ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶದಲ್ಲಿ ಕೃಷಿ, ಹೈನುಗಾರಿಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಭಾರತದಲ್ಲಿ ಅಧಿಕ ಜನಸಂಖ್ಯೆ, ಕಡಿಮೆ ಭೂಪ್ರದೇಶದಿಂದ ಕೃಷಿ ಲಾಭದಾಯಕವಲ್ಲ. ಇದರಿಂದಲೇ ಪ್ರವರ್ಧಮಾನಕ್ಕೆ ಬರುವುದು ಸಾಧ್ಯವಿಲ್ಲ. ಆದ್ದರಿಂದ ಶಿಸ್ತು ಮತ್ತು ಸಂಯಮದಿಂದ ಉದ್ಯಮ ಕ್ಷೇತ್ರದಲ್ಲೂ ಯಶಸ್ಸು ಆಗಬಹುದು ಎಂದರು.
ನನಗೆ ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ. ನನಗೆ ರಾಜಕಾರಣವೇ ಉದ್ಯಮ ಎಂದ ಅವರು, 40 ವರ್ಷಗಳ ಹಿಂದೆ ಕೊಪ್ಪಲುಗಳು, ಪಡುವಾರಹಳ್ಳಿ, ಮೇಟಗಳ್ಳಿ ಸೇರಿದಂತೆ ಇನ್ನಿತರ ಒಕ್ಕಲಿಗರು ನೇಗಿಲು, ಎತ್ತುಗಳೊಂದಿಗೆ ವ್ಯವಸಾಯ ಪರಿಸ್ಥಿತಿ ಇತ್ತು. ಆದರೀಗ ಅದೆಲ್ಲ ಕಣ್ಮರೆಯಾಗಿದೆ. ನಮ್ಮವರು ಕೃಷಿ ಭೂಮಿ ಕಳೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಒಕ್ಕಲಿಗ ಸಮುದಾಯದಲ್ಲಿ ಶೇ.10ರಷ್ಟು ಉದ್ದಿಮೆದಾರರಿದ್ದಾರೆ. ಉಳಿದಂತೆ ಬಹಳಷ್ಟು ಜನರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಒಕ್ಕಲಿಗರು ಉದ್ಯಮಶೀಲರಾಗಬೇಕು. ಈ ಮೂಲಕ ನಮ್ಮಲ್ಲಿ ಉದ್ದಿಮೆದಾರರ ಸಂಖ್ಯೆ ಹೆಚ್ಚಾಗಬೇಕು. ಬೇರೆ ಸಮುದಾಯದವರಂತೆ ಒಕ್ಕಲಿಗರು ಉದ್ಯಮ ಸ್ಥಾಪನೆಗೆ ಆರ್ಥಿಕ ಸಹಾಯ ಮಾಡಿ ಅಭಿವೃದ್ಧಿಗೆ ನೆರವಾಗಬೇಕು ಎಂದರು.
ಐಆರ್‌ಎಸ್ ಚೀಫ್ ಮೆಂಟರ್ ಜಯರಾಮ್ ರಾಯಪುರ ಮಾತನಾಡಿ, ಪ್ರತಿ ವರ್ಷ ಜನವರಿಯಲ್ಲಿ ರಾಜ್ಯಮಟ್ಟದ ಒಕ್ಕಲಿಗ ಉದ್ದಿಮೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಸಲ ಮೊದಲ ಬಾರಿಗೆ ಮೈಸೂರಿನಲ್ಲಿ ಜು.27, 28ರಂದು ಇಂತಹವೊಂದು ಸಮಾವೇಶವನ್ನು ಆಯೋಜಿಸಲಾಗುವುದು ಎಂದರು.
ಒಕ್ಕಲಿಗರ ಮನೋಭಾವ ಬದಲಾಗಬೇಕು. ಉದ್ಯಮಶೀಲತೆಗೆ ತೆರೆದುಕೊಳ್ಳಬೇಕು. ಆರ್ಥಿಕ ಶಕ್ತಿ ಇಲ್ಲದಿದ್ದರೆ ಸಾಮಾಜಿಕ, ರಾಜಕೀಯ ಶಕ್ತಿ ಬರುವುದಿಲ್ಲ. ಜತೆಗೆ, ಸಮುದಾಯದ ಪ್ರಾತಿನಿಧ್ಯ, ಸ್ಥಾನಮಾನವೂ ಕುಗ್ಗಲಿದೆ. ಇದಕ್ಕೆ ಅವಕಾಶ ನೀಡದೆ ಆರ್ಥಿಕ ಬಲವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಶಾಸಕ ಜಿ.ಡಿ.ಹರೀಶ್‌ಗೌಡ, ಎಫ್‌ಸಿ ಅಧ್ಯಕ್ಷ ಎಂ.ಕೆ.ಯಶ್ವಂತಕುಮಾರ್, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ, ಎಫ್‌ಸಿ ಸೆಂಟ್ರಲ್ ಮೈಸೂರು ಶಾಖೆಯ ಗೌರವಾಧ್ಯಕ್ಷ ಸಿ.ನಾರಾಯಣಗೌಡ, ಲೀ ರುಚಿ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಮಂಜುನಾಥ್, ಮಿಡಾಸ್ ಸಿಇಒ ಎಂ.ಎ.ಮದನ್‌ಕುಮಾರ್, ಎಫ್‌ಸಿ ಪದಾಧಿಕಾರಿಗಳಾದ ನಂದೀಶ್, ತ್ಯಾಗರಾಜು ಸಿದ್ದೇಗೌಡ, ಎಸಿಪಿ ರಾಜೇಂದ್ರಪ್ರಸಾದ್ ಇನ್ನಿತರರಿದ್ದರು.