ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

19
Published on

ಮೈಸೂರು: ಮೈಸೂರು ನಗರ ಹಾಗೂ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಬರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದ ಸಚಿವರು, ಯಾವುದೇ ಜಲಮೂಲಗಳ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸಬಾರದು. ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಮಾಡಿ ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಸಿದ್ಧವಾಗಿರಬೇಕು ಎಂದು ಸೂಚಿಸಿದರು.

ಆದಷ್ಟು ಹೊಸ ಕೊಳವೆಬಾವಿ ತೆಗೆಯುವ ಬದಲು ಹಾಲಿ ಇರುವ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ ಮೋಟಾರು, ಪಂಪ್ ಅಳವಡಿಸಿ ನೀರು ಪೂರೈಕೆಗೆ ಕ್ರಮವಹಿಸಬೇಕು. ಈ ಸಂದರ್ಭದಲ್ಲಿ ಒಂದು ಹನಿ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು.ಅವಶ್ಯವಿದ್ದರೆ ಖಾಸಗಿ ಬೋರ್‌ಗಳನ್ನು ಉಪಯೋಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮಾತನಾಡಿ, ನದಿಪಾತ್ರದಲ್ಲಿ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಗಿದೆ. ಕುಡಿಯುವ ನೀರನ್ನು ಕೃಷಿಗೆ ಬಳಸದಂತೆ ಜಾಗೃತಿ ಮೂಡಿಸಲಾಗಿದೆ. ಅಗತ್ಯವಿದ್ದರೆ ಹಾರಂಗಿ ಹಾಗೂ ಹೇಮಾವತಿಯಿಂದಲೂ ನೀರು ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಂಜಿತ್ ಮಾತನಾಡಿ, ಪ್ರಸ್ತುತ 2 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 134 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುವ ಸಂಭವವಿದೆ. ಈ ಪೈಕಿ 36 ಗ್ರಾಮಗಳಿಗೆ ಪ್ರತಿನಿತ್ಯ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

34 ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು, ರೈತರಿಗೆ ಮೇವಿನ ಪೊಟ್ಟಣಗಳನ್ನೂ ಕೊಡಲಾಗುವುದು. ಈಗಾಗಲೇ 68 ಸಾವಿರ ಮೇವಿನ ಕಿಟ್‌ಗಳನ್ನು ನೀಡಲಾಗಿದೆ. ಸದ್ಯಕ್ಕೆ ಗೋಶಾಲೆ ತೆರೆಯುವ ಅವಶ್ಯಕತೆ ಇಲ್ಲ. ಈಗಾಗಲೇ ಅಂತಾರಾಜ್ಯ ಮೇವು ಸಾಗಣೆ ನಿರ್ಬಂಧ ಜಾರಿಯಲ್ಲಿದೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಪೂರ್ವ ಮುಂಗಾರಿನಲ್ಲಿ ಹತ್ತಿ ಬೀಜಗಳ ಕೊರತೆ ಉಂಟಾಗಿದ್ದು, ಗುಣಮಟ್ಟ ಕಡಿಮೆ ಇದೆ. ಸದ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ 1.20 ಲಕ್ಷ ಪ್ಯಾಕೆಟ್ ಹತ್ತಿ ಬೀಜ ದೊರೆಯಲಿವೆ. ಈಗಾಗಲೇ ಬರ ಪರಿಹಾರದಡಿ ತಲಾ 2 ಸಾವಿರ ರೂ.ಗಳಂತೆ ಜಿಲ್ಲೆಯ 88,620 ರೈತರಿಗೆ 15.83 ಕೋಟಿ ರೂ. ಪರಿಹಾರ ಖಾತೆಗಳಿಗೆ ಜಮೆಯಾಗಿದೆ. ಸರ್ಕಾರ ರೈತರಿಗಾಗಿ ನೀಡಿರುವ ಎಲ್ಲ ಯೋಜನೆಗಳು ಜಿಲ್ಲೆಯ ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ. ಸಿಇಒ ಕೆ.ಎಂ.ಗಾಯತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net