ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ

Let drinking water not be a problem
ಬಸವನಬಾಗೇವಾಡಿ ಪುರಸಭೆ ಸಭಾಭವನದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ತಹಸೀಲ್ದಾರ್‌ಗಳಾದ ಯಮನಪ್ಪ ಸೋಮನಕಟ್ಟಿ, ಎ.ಡಿ. ಅಮರಾವತಿ, ಎಸ್.ಎಸ್. ನಾಯಕಲಮಠ, ತಾಪಂ ಇಒಗಳಾದ ಯುವರಾಜ ಹನಗಂಡಿ, ವಿರೇಶ ಹಿರೇಮಠ, ಸುನೀಲ ಮದ್ದಿನ ಇತರರಿದ್ದರು.
Published on

ಬಸವನಬಾಗೇವಾಡಿ: ಬರುವ ಬೇಸಿಗೆ ಸಂದರ್ಭದಲ್ಲಿ ಅಖಂಡ ಬಸವನಬಾಗೇವಾಡಿ ತಾಲೂಕಿನ ಯಾವುದೇ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷೃ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆ ನೂತನ ಕಟ್ಟಡದ ಸಭಾಭವನದಲ್ಲಿ ಮಂಗಳವಾರ ಸಂಜೆ ಅಖಂಡ ಬಸವನಬಾಗೇವಾಡಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಬಸವನಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ 3 ಪಟ್ಟಣ ಪಂಚಾಯಿತಿ, 1 ಪುರಸಭೆ ಹಾಗೂ ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಸುಮಾರು 120ಕ್ಕೂ ಹೆಚ್ಚು ಹಳ್ಳಿಗಳಿಗೆ ಬರುವ ಬೇಸಿಗೆ ಸಂದರ್ಭದಲ್ಲಿ ಯಾವುದೇ ರೀತಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮತ್ತು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ತಾಲೂಕಿನ ಮಣ್ಣೂರ ಕೆರೆಯಿಂದ ನಾಗೂರ ಗ್ರಾಮಕ್ಕೆ ಕುಡಿಯುವ ನೀರು ಸರಬುರಾಜು ಆಗುವಂತೆ ಕ್ರಮ ವಹಿಸಬೇಕು. ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಕೆಬಿಜೆಎನ್‌ಎಲ್ ಕಚೇರಿಗೆ ಹಾಗೂ ಸರ್ಕಾರಿ ಡಿಪ್ಲೋಮಾ, ಐಟಿಐ ಕಾಲೇಜುಗಳಿಗೆ ಪಟ್ಟಣದಿಂದ ಕುಡಿಯುವ ನೀರು ಸರಬರಾಜಾಗುವಂತೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಸಂಜೆ 6 ನಂತರ ವೈದ್ಯರು ಇರೋಲ್ಲಾ ಎಂಬ ದೂರುಗಳು ಕೇಳಿ ಬಂದಿವೆ. ಇನ್ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು. ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಬರುವ 3-4 ಹಳ್ಳಿಗಳಲ್ಲಿ ಮಲೇರಿಯಾ ಹಾಗೂ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು. ವೈದ್ಯರು ಗಮನಹರಿಸಬೇಕು ಎಂದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಸರ್ಕಾರಿ ಅಕ್ಕನಾಗಮ್ಮ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಕಾಲೇಜನ್ನು ಇಂಗಳೇಶ್ವರ ರಸ್ತೆಯಲ್ಲಿರುವ ದೇವಸ್ಥಾನದ ಜಮೀನಿನಲ್ಲಿ ಎಲ್ಲ ಶಾಲಾ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಬೇಕು. ಟಕ್ಕಳಕಿ ಹಾಗೂ ಸಂಕನಾಳ ಉಪಕಾಲುವೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಆ ಕಾಲುವೆಗಳಿಂದ ಹಳ್ಳಿಗಳ ಕೆರೆ ತುಂಬಿಸಲು ಸಹಕಾರವಾಗುತ್ತದೆ. ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕ ಬಿಲ್ ಪಾವತಿಸಬೇಕು ಎಂದು ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಕೊಲ್ಹಾರ ಪಟ್ಟಣ ಸೇರಿ 7 ಪುನರ್‌ವಸತಿ ಹಳ್ಳಿಗಳಲ್ಲಿ ಅಕ್ರಮವಾಗಿ ಹಕ್ಕುಪತ್ರ ಪ್ರಕರಣದ ಕುರಿತು ಅಧಿಕಾರಿಗಳು ಕ್ರಮ ಜರುಗಿಸುವಲ್ಲಿ ವಿಫಲವಾಗಿದ್ದೀರಿ. ಕಳೆದ ಹತ್ತು ವರ್ಷದಿಂದ ಅಕ್ರಮ ಹಕ್ಕುಪತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೂ ಪೂರ್ಣಗೊಳ್ಳುತ್ತಿಲ್ಲ. ತಕ್ಷಣ ಅಧಿಕಾರಿಗಳು ಈ ಪ್ರಕರಣಕ್ಕೆ ಅಂತ್ಯ ಹಾಡಬೇಕು ಎಂದರು.

ತಹಸೀಲ್ದಾರ್‌ಗಳಾದ ಯಮನಪ್ಪ ಸೋಮನಕಟ್ಟಿ, ಎ.ಡಿ. ಅಮರಾವತಿ, ಎಸ್.ಎಸ್. ನಾಯಕಲಮಠ, ತಾಪಂ ಇಒಗಳಾದ ಯುವರಾಜ ಹನಗಂಡಿ, ವಿರೇಶ ಹಿರೇಮಠ, ಸುನೀಲ ಮದ್ದಿನ, ಆಲಮಟ್ಟಿ ಪುನರವಸತಿ ಪುನರ್ ನಿರ್ಮಾಣ ಅಧಿಕಾರಿ ಕಿಶನ್ ಕಲಾಲ, ರವಿ ಸೋಲಾಪುರ, ಜಿಪಂ ಎಇಇ ವಿಲಾಸ ರಾಠೋಡ, ಪಿಡಬ್ಲುೃಡಿ ಎಇಇ ಜಗದೀಶ ಕಿರಸೂರ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇ ಎಸ್.ಬಿ. ಗೊಂಗಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೊಬೈಲ್ ಬಂದ್ ಮಾಡಬೇಡಿ…

ಮೂವರು ತಹಸೀಲ್ದಾರ್, ಮೂವರು ತಾಪಂ ಇಒಗಳು ಹಾಗೂ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಮತ್ತು ಕೃಷ್ಣ ಭಾಗ್ಯ ಜಲ ನಿಗಮ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಂಗಳಿಗೊಮ್ಮೆ ಸಭೆ ನಡೆಸಿ ಪಿಡಿಒಗಳಿಗೆ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಸೂಚಿಸಬೇಕು. ಜ. 1ರಿಂದ ಜೂನ್‌ವರೆಗೆ ಪಿಡಿಒಗಳು ತಮ್ಮ ಮೊಬೈಲ್‌ನ್ನು ನಿರಂತರವಾಗಿ ಆನ್‌ನಲ್ಲಿಡಬೇಕು. ಸಾರ್ವಜನಿಕರು ಪೋನ್ ಮಾಡಿದ ತಕ್ಷಣ ಅಲ್ಲಿನ ಸಮಸ್ಯೆ ಪರಿಹರಿಸಬೇಕು. ಪೋನ್ ಬಂದ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಕುಡಿಯುವ ನೀರಿಗಾಗಿ ಹಣ ಕಾಯ್ದಿಡಬೇಕು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net