

ರಬಕವಿ-ಬನಹಟ್ಟಿ: ರಾಜ್ಯದಲ್ಲಿ ಶಾಸಕತ್ವ ನಂತರದ ಸ್ಥಾನಗಳಾದ ಜಿಪಂ, ತಾಪಂ ಸದಸ್ಯತ್ವವಾಗಿವೆ. ಆದರೆ ಅವುಗಳಿಗೆ 5 ವರ್ಷ ಕಳೆದರೂ ಚುನಾವಣೆ ನಡೆಯುವಲ್ಲಿ ತೀವ್ರ ವಿಳಂಬವಾಗಿರುವುದಕ್ಕೆ ಮೀಸಲಾತಿ ಹಾಗೂ ಗ್ರಾಮ ಗಡಿ ಗುರುತಿಸುವ ಸಮಸ್ಯೆ ಎದುರಾಗಿತ್ತು. ಶೀಘ್ರ ಗ್ರಾಮೀಣ ಅಭಿವೃದ್ಧಿಗೆ ಚುನಾವಣೆ ನಡೆಸುವಲ್ಲಿ ಸರ್ಕಾರ ನಿರ್ಣಯ ಕೈಗೊಳ್ಳಬೇಕೆಂದು ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಒತ್ತಾಯಿಸಿದರು.
ಬನಹಟ್ಟಿಯ ಐಬಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ನ್ಯಾಯಾಲಯ ಹಾಗೂ ಚುನಾವಣಾ ಆಯೋಗ ಚುನಾವಣೆ ನಡೆಸುವಂತೆ ಸೂಚಿಸಿದೆ. ಪಕ್ಷದ ಮುಖಂಡರ, ನಾಯಕರ ಹಾಗೂ ಕಾರ್ಯಕರ್ತರ ಭಾವನೆಗಳ ಒತ್ತಡದಿಂದ ಸ್ವಪಕ್ಷದ ಸರ್ಕಾರವಿದ್ದರೂ ಒತ್ತಾಯಪಡಿಸುತ್ತಿರುವುದು ಅನಿವಾರ್ಯವಾಗಿದೆ ಎಂದರು.
ರಾಜ್ಯದ 31 ಜಲ್ಲೆಗಳಲ್ಲಿ ಜಿಪಂನ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಜನಪ್ರತಿನಿಧಿಗಳಾಗುತ್ತಾರೆ. ಅದರಂತೆ 3500 ತಾಪಂ ಸದಸ್ಯರಾಗುತ್ತಾರೆ. ಇದರಿಂದ ಕಾರ್ಯಕರ್ತರಿಗೆ ಹುಮ್ಮಸ್ಸು ಬಂದಂತಾಗಿ ಪಕ್ಷ ಬಲವರ್ಧನೆಗೊಂಡು ಅಧಿಕಾರ ವಿಕೇಂದ್ರೀಕರಣವಾದಂತಾಗುತ್ತದೆ ಎಂದರು.
ನೂತನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಿಂದ ಮೂರ‌್ನಾಲ್ಕು ಆಕಾಂಕ್ಷಿತರಿದ್ದಾರೆ. ಜು.15 ರಂದು ಬಾಗಲಕೊಟೆಯಲ್ಲಿ ಪಕ್ಷದ ವೀಕ್ಷಕರ ಸಭೆ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 7 ವಿಧಾನಸಭೆಯಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ತೇರದಾಳ ಮತ್ತು ಜಮಖಂಡಿಯಲ್ಲಿಯೂ ಕಾಂಗ್ರೆಸ್ ಗೆಲುವಾಗಬೇಕಿತ್ತು. ಬಂಡಾಯದ ಬಿಸಿಯಿಂದ ಸೋಲು ಕಾಣಬೇಕಾದ ಸ್ಥಿತಿ ಎದುರಾಯಿತು. ಮುಂದಿನ ಚುನಾವಣೆಯಲ್ಲಿ ಇಡಿ ಜಿಲ್ಲೆಯೇ ಕಾಂಗ್ರೆಸ್ ಮಯವಾಗಲಿದೆ ಎಂದು ನಂಜಯ್ಯನಮಠ ತಿಳಿಸಿದರು.
ಮುಖಂಡರಾದ ಸಿದ್ದು ಕೊಣ್ಣೂರ, ಮಲ್ಲಪ್ಪ ಸಿಂಗಾಡಿ, ಭೀಮಶಿ ಮಗದುಮ್, ಗಿರೀಶ ಅಂಕಲಗಿ, ಬಸವರಾಜ ಕೊಕಟನೂರ, ನೀಲಕಂಠ ಮುತ್ತೂರ, ಶೇಖರ ಹಕ್ಕಲದಡ್ಡಿ, ಶಂಕರ ಕೆಸರಗೊಪ್ಪ, ಸುರೇಶ ಉತ್ತೂರ, ಸಂಜು ಜೋತಾವರ, ರಾಹುಲ ಕಲಾಲ, ಅಶೋಕ ತಳವಾರ ಇದ್ದರು.