

ವಿಜಯಪುರ: ಭಾರತದಲ್ಲಿ ಒಂದು ಸಾವಿರ ವರ್ಷ ಮೊಘಲರ ಆಳ್ವಿಕೆಯನ್ನು ವೈದಿಕರು ಸಹಿಸಿಕೊಂಡರು. ಆದರೆ, 150 ವರ್ಷಗಳ ಬ್ರಿಟಿಷ್ ಆಳ್ವಿಕೆಯನ್ನು ಸಹಿಸಲಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ ಮೂಡ್ನಾಕೋಡು ಚಿನ್ನಸ್ವಾಮಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಸಾಪ ಬೆಳ್ಳಿ ಸಂಭ್ರಮ ನಿಮಿತ್ತ ಹಮ್ಮಿಕೊಂಡ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾನುವಾರ ಬೆಳ್ಳಿ ಸಂಭ್ರಮ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬ್ರಿಟಿಷರು ಕಂದಾಚಾರಗಳನ್ನು ವಿರೋಧಿಸಿದ್ದರಿಂದ ಅವರ ಆಡಳಿತವನ್ನು ಅವರಿಗೆ ಸಹಿಸಲಾಗಲಿಲ್ಲ.ದಲಿತರಿಗೆ ಅಕ್ಷರ ಮಾತ್ರವಲ್ಲ, ಅನ್ನ ನೀರು ಕೊಡದೆ ಪೀಡಿಸಿದ ವರ್ಗದವರು ಸಮಾಜ ಸುಧಾರಣೆ ಕಾನೂನುಗಳನ್ನು ವಿರೋಧಿಸಿದರು. ಆದರೆ, ಅಂಬೇಡ್ಕರ್ ಪ್ರಯತ್ನದಿಂದ ದಲಿತರಿಗೆ ಗೌರವ ದೊರೆಯಲು ಸಾಧ್ಯವಾಯಿತು ಎಂದರು.
ದಲಿತ ಸಾಹಿತ್ಯ ಇಂಗ್ಲಿಷ್ ಸೇರಿ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಸ್ವೀಕರಿಸಿದ ಡಾ. ಗವಿಸಿದ್ದಪ್ಪ ಪಾಟೀಲ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ನಾಡಿನ ಎಲ್ಲರನ್ನು ಒಳಗೊಳ್ಳುವ ಮೂಲಕ ಮಾದರಿ ಕಾರ್ಯ ಮಾಡುತ್ತಿದೆ ಎಂದರು.
ಪ್ರಶಸ್ತಿ ಪುರಸ್ಕೃತೆ ಮುರ್ತುಜಾ ಬೇಗಂ ಕೊಡಗಲಿ ಮಾತನಾಡಿ, ಹಳ್ಳಿಗಳಲ್ಲಿ ಬೇರೂರಿರುವ ಅಸಮಾನತೆ ತೊಲಗಿಸಬೇಕಾಗಿದೆ ಎಂದರು.
ವಿವಿಧ ಪ್ರಶಸ್ತಿ ಪುರಸ್ಕೃತರಾದ ರೇಣುಕಾ ಹೆಳವರ, ಮುಳ್ಳೂರು ಶಿವಮಲ್ಲು, ಡಾ ಹೊಂಬಯ್ಯ ಹೊನ್ನಲಗೆರೆ, ಸ್ವಪ್ನ ಬುಕ್ ಹೌಸ್‌ನ ದೊಡ್ಡೇಗೌಡ, ಡಾ ಎಂ. ಬಿ. ಕಟ್ಟಿ, ಗಣಪತಿ ಚಲವಾದಿ ಮಾತನಾಡಿದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತೆ ಸೌಜನ್ಯ ಕರಡೋಣಿ, ಸಮ್ಮೇಳನ ಅಧ್ಯಕ್ಷರಿಗೆ ಹಾಗೂ ಗಣ್ಯರಿಗೆ ತಮ್ಮ ಕಲಾಕೃತಿ ನೀಡಿ ಗೌರವಿಸಿದರು.
ಗೌರವ ಪ್ರಶಸ್ತಿಗೆ ಭಾಜನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರ್. ದೊಡ್ಡೇಗೌಡ (ಸಾಹಿತ್ಯ), ವೀರಹನುಮಾನ ರಾಯಚೂರು (ಸಾಹಿತ್ಯ), ಶ್ರೀಶೈಲ ನಾಗರಾಳ (ಸಾಹಿತ್ಯ), ಡಾ. ಗವಿಸಿದ್ದಪ್ಪ ಪಾಟೀಲ (ಸಾಹಿತ್ಯ), ಮುರ್ತುಜಾಬೇಗಂ ಕೊಡಗಲಿ(ಸಾಹಿತ್ಯ), ಹಾರೋಹಳ್ಳಿ ರವೀಂದ್ರ (ಸಾಹಿತ್ಯ), ಪರಶುರಾಮ ಶಿವಶರಣ (ಸಾಹಿತ್ಯ), ನರೇಂದ್ರ ನಾಗವಾಲ (ಸಮಾಜಸೇವೆ), ಮುಳ್ಳೂರ ಶಿವಮಲ್ಲು (ದಲಿತ ಚಳವಳಿ), ಡಾ. ಸಂಜೀವಕುಮಾರ ಮಾಲಗತ್ತಿ (ಪತ್ರಿಕಾರಂಗ), ರಾಜು ವಿಜಯಪುರ (ಪತ್ರಿಕಾರಂಗ), ಸೌಜನ್ಯ ಕರಡೋಣಿ (ಚಿತ್ರಕಲೆ), ಸಿ. ಆರ್. ನಟರಾಜ (ಸಂಗೀತ), ದೇವು ಅಂಬಿಗ(ಸಿನಿಮಾ) ಅವರಿಗೆ ಬೆಳ್ಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಾರ್ಷಿಕ ವಿವಿಧ ದತ್ತಿ ಹಾಗೂ ಪ್ರಸ್ತಕ ಪ್ರಶಸ್ತಿ:
ಬಿಡಲೋಟಿ ರಂಗನಾಥ್, ಡಾ ಸದಾಶಿವ ದೊಡಮನಿ, ಡಾ ಶಾಂತನಾಯ್ಕ ಶಿರಾಗಾನಹಳ್ಳಿ, ರೇಣುಕಾ ಹೆಳವರ, ಪಿ. ಆರ್. ಮಲ್ಲಯ್ಯ ಕಟ್ಟೇರ, ಡಾ ಪ್ರಸನ್ನ ನಂಜಾಪುರ, ಡಾ ಗಿರೀಶ ಮೂಗ್ತಿಹಳ್ಳಿ, ಪ್ರಭುಲಿಂಗ ನೀಲೂರೆ, ಗೌಡಗೆರೆ ಮಾಯುಶ್ರೀ, ಡಾ ಎಚ್. ಡಿ. ಉಮಾಶಂಕರ, ಸೋಮಲಿಂಗ ಗೆಣ್ಣೂರ, ಡಾ ಎಂ. ಬಿ. ಕಟ್ಟಿ, ಡಾ ಹೊಂಬಯ್ಯ ಹೊನ್ನಲೆಗೆರೆ, ಡಾ ಅಮರೇಶ ಯತಗಲ್, ಡಾ ಪೂರ್ಣಿಮಾ, ರಾಯಸಾಬ ದರ್ಗಾ ಅವರಿಗೆ ವಿವಿಧ ದತ್ತಿ ಹಾಗೂ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಸಾಪ ಸಂಘಟನೆ ವಿಭಾಗೀಯ ಸಂಯೋಜಕ ಗಣಪತಿ ಚಲವಾದಿ, ರಾಯಚೂರು ದಸಾಪ ಜಿಲ್ಲಾಧ್ಯಕ್ಷ ತಾಯರಾಜ್ ಮಚಟಹಾಳ, ತಾಲೂಕು ಅಧ್ಯಕ್ಷ ಹುಸೇನಪ್ಪ ಅಮರಾಪುರ ಅವರಿಗೆ ದಸಾಪ ಅತ್ಯುತ್ತಮ ಸಂಘಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನಾಧ್ಯಕ್ಷ ಡಾ. ಎಚ್.ಟಿ.ಪೋತೆ, ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಖಜಾಂಚಿ ಡಾ. ಎಚ್. ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೊದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕು ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.