

ಲಕ್ಷೆ್ಮೕಶ್ವರ: ಪ್ರೇಕ್ಷಕರ ಎದುರು ಸಲೀಸಾಗಿ ಹಾಡುವ ಹಾಗೂ ಲೀಲಾಜಾಲವಾಗಿ ವಾದ್ಯಗಳನ್ನು ನುಡಿಸುವ ಕಲಾವಿದರ ಹಿಂದೆ ದೊಡ್ಡ ಪರಿಶ್ರಮ ಅಡಗಿರುತ್ತದೆ. ನಿಜಕ್ಕೂ ಅವರು ಮಹಾತಪಸ್ವಿಗಳು ಎಂದು ಕುಂದಗೋಳದ ದಿ. ಗುರುವರ್ಯ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಅಧ್ಯಕ್ಷ ಅರವಿಂದ ಕಟಗಿ ಹೇಳಿದರು.
ಪಟ್ಟಣದ ಗುರು ಗಂಧರ್ವ ಸಂಗೀತ ಸಭಾ ವತಿಯಿಂದ ಎಪಿಎಂಸಿ ವರ್ತಕರ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತಕ್ಕೆ ದೊಡ್ಡ ಪರಂಪರೆಯಿದೆ. ಗುರು ಶಿಷ್ಯರ ಬಾಂಧವ್ಯವನ್ನು ಇದರಲ್ಲಿ ಕಾಣುತ್ತೇವೆ. ನಿರಂತರ ಅಭ್ಯಾಸ ಮಾಡುವವರಿಗೆ ಮಾತ್ರ ಸರಸ್ವತಿ ಒಲಿಯುತ್ತಾಳೆ. ಸಂಗೀತ ಕಲಾವಿದರು ಯಾರ ಹಂಗಿನಲ್ಲೂ ಇರುವುದಿಲ್ಲ. ಸಂಗೀತವೂ ಜನರ ಮನಸನ್ನು ಹತ್ತಿರ ಸೇರಿಸುವ ಕಾರ್ಯವನ್ನು ಮಾಡುತ್ತದೆ. ನಮ್ಮ ಸಂಸ್ಕೃತಿ-ಪರಂಪರೆ ಉಳಿಸಿ-ಬೆಳೆಸುವ ಸಂಪ್ರದಾಯ ನೆಲೆ ನಿಲ್ಲಬೇಕಾಗಿದೆ ಎಂದರು.
ಸಾಹಿತಿ ಕೆ.ಎಸ್. ಕೊಡ್ಲಿವಾಡ ಮಾತನಾಡಿ, ಹಿಂದೂಸ್ತಾನಿ ಸಂಗೀತಕ್ಕೆ ಮಹತ್ತರವಾದ ಇತಿಹಾಸ ಮತ್ತು ಪರಂಪರೆ ಇದೆ. ತಾನಸೇನ್ ಮತ್ತು ಏಕನಾಥ ಮಹಾರಾಜರು ಭಾರತದ ಪ್ರಸಿದ್ಧ ಸಂಗೀತ ಕಲಾವಿದರು. ಅದರಂತೆ ದಾಸರು, ಶರಣರು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೊಬೈಲ್ಫೋನ್ ಹಾವಳಿಯಿಂದಾಗಿ ಮಕ್ಕಳಲ್ಲಿ ಸಂಗೀತದ ಬಗ್ಗೆ ಒಲವು ಕಡಿಮೆ ಆಗುತ್ತಿದ್ದು, ಮತ್ತೆ ಅವರನ್ನು ಸಂಗೀತದತ್ತ ಕರೆ ತರಲು ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕಾಗಿವೆ ಎಂದರು.
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಸಂಗೀತ ಕ್ಷೇತ್ರ ಉಳಿಯಬೇಕಾದರೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುರು ಗಂಧರ್ವ ಸಂಗೀತ ಸಭಾದ ಅಧ್ಯಕ್ಷ ಪರಶುರಾಮ ಭಜಂತ್ರಿ ಮಾತನಾಡಿ, ನನ್ನ ಸಂಗೀತ ಗುರುಗಳಾದ ಅಶೋಕ ನಾಡಿಗೇರ ಅವರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿದ್ದೇವೆ. ನಾಡಿನಲ್ಲಿನ ಸಂಗೀತ ಕಲಾವಿದರನ್ನು ಕರೆಸಿ ಅವರಿಗೆ ವೇದಕೆ ಒದಗಿಸಿ ಕೊಡುವ ಕೆಲಸ ನಿರಾಂಕತವಾಗಿ ಸಾಗಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ, ಸಹಕಾರ ಇದೆ ಎಂದರು.
ಈ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಅಶೋಕ ನಾಡಿಗೇರ, ರವಿ ಕಾತೂರ, ನಾಗನಗೌಡ ಚಿಕ್ಕನಗೌಡ್ರ, ಸಂಗೀತಗಾರ ಚೌಧರಿ, ಶಿಕ್ಷಕ ಹಾಲಗುಂಡಿ, ಇತರರಿದ್ದರು. ನಂತರ ಶಿರಸಿಯ ರೇಖಾ ದಿನೇಶ, ಪರಶುರಾಮ ಭಜಂತ್ರಿ, ಡಾ.ಅರ್ಜುನ ವಠಾರದ ಗಾಯನ ಪ್ರಸ್ತುತ ಪಡಿಸಿದರು. ಕೃಷ್ಣಕುಮಾರ ಕುಲಕರ್ಣಿ, ಅನಂತ ಪಾವಣಸ್ಕರ್, ಡಾ. ಶ್ರೀಹರಿ ದಿಗ್ಗಾವಿ, ಅಕ್ಷಯಕುಮಾರ ಭಜಂತ್ರಿ ತಬಲಾ ಮತ್ತು ಸಾರಂಗ ಕುಲಕರ್ಣಿ, ಶಿವಸ್ವಾಮಿ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.