ಆಸ್ತಿ ಬದಲು ಸಂಸ್ಕಾರ ವರ್ಧಂತಿಯಾಗಲಿ

GKN VARDANTI
Published on

ಗೋಕರ್ಣ: ಮಕ್ಕಳಿಗೆ ಆಸ್ತಿ-ಸಂಪತ್ತು, ಧನ-ಕನಕಗಳ ಬದಲು ಧರ್ಮ, ಗೋವು ಮತ್ತು ವಿದ್ಯಾಧನವನ್ನು ಸಂರಕ್ಷಿಸುವಂತಹ ಉತ್ತಮ ಜ್ಞಾನ ಮತ್ತು ಸಂಸ್ಕಾರಗಳನ್ನು ಕೊಡಬೇಕು. ಇದೇ ಯಾವತ್ತೂ ಉಳಿಯಬಲ್ಲ ಶಾಶ್ವತವಾದ ವರ್ಧಂತಿಯಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಇಲ್ಲಿನ ಮೂಲಮಠ ತಾಣ ಅಶೋಕೆಯಲ್ಲಿ 32ನೇ ಸ್ವಭಾಷಾ ಚಾತುರ್ವಸ್ಯದಲ್ಲಿ ಭಾನುವಾರ ಶಿಷ್ಯಭಕ್ತರಿಂದ ಆಚರಿತವಾದ ವರ್ಧಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವರ್ಧಂತಿ ಎಂದರೆ ಬೆಳವಣಿಗೆ. ಇದು ಅಸಾಮಾನ್ಯವಾದ ಬಹುವಿಧದ ಬೆಳವಣಿಗೆ. ಸಾಮಾನ್ಯರು ಇದನ್ನು ಜನ್ಮದಿನ ಮತ್ತು ಹುಟ್ಟು ಹಬ್ಬವಾಗಿ ಆಚರಿಸಿದರೆ ಪೀಠಸ್ಥರಾದ ಯತಿಗಳಿಗೆ ಇದು ವರ್ಧಂತಿ ರೂಪದಲ್ಲಿ ಸಮರ್ಪಿತವಾಗುತ್ತದೆ. ಸಾಮಾನ್ಯರದು ಸೀಮಿತ ಜನ ಪರಿವಾರವಾದರೆ, ಪೀಠಾಧಿಪತಿಗಳದು ಲಕ್ಷೋಪಲಕ್ಷ ಶಿಷ್ಯರಿಂದ ಒಡಗೂಡಿದ ವಿಶ್ವ ಕುಟುಂಬಸ್ಥ ವಿಶಾಲ ಪರಿವಾರವಾಗಿ ಸಮೃದ್ಧವಾಗಿರುವುದೇ ವರ್ಧಂತಿ ಎನ್ನುವುದಕ್ಕೆ ಹಿನ್ನೆಲೆ. ಇಂತಹ ಚತುರ್ಥಾಶ್ರಮಿಗಳಾದ ಯತಿವರೇಣ್ಯರಿಗೆ ಗರ್ಭದಿಂದ ಓರ್ವ ಮಾತೆ ಹೊತ್ತರೆ, ಹೃದಯದಿಂದ ಹೊತ್ತವರು ಸಹಸ್ರ ಸಹಸ್ರ ಮಾತೆಯಂದಿರಾಗಿದ್ದಾರೆ ಎಂದು ತಿಳಿಸಿದರು.

ಯಾರು ಮತ್ತು ಹೇಗೆ ಮಾಡಬೇಕು?: ಸಾಮಾನ್ಯರು ಜನನೋತ್ಸವ ಆಚರಿಸಿಕೊಳ್ಳಬಹುದು. ಆದರೆ ದೇಹಾಭಿಮಾನ, ವಿತ್ತಾಭಿಮಾನ ಸೇರಿ ಸರ್ವವನ್ನು ಕಳೆದುಕೊಳ್ಳುವುದು ಸಂನ್ಯಾಸಾಶ್ರಮ. ಗೃಹಸ್ಥಾಶ್ರಮದಲ್ಲಿ ಕೂಡುವ ಲೆಕ್ಕ. ಸಂನ್ಯಾಸ ಕಳೆಯಲ್ಪಡುವ ಲೆಕ್ಕ. ಈ ಹಿನ್ನೆಲೆಯಲ್ಲಿ ಯತಿಗಳು ತಾವೇ ಮುಂದಾಗಿ ವರ್ಧಂತಿ ಆಚರಿಸುವುದು ಸಲ್ಲ. ಆದರೆ, ಅವರ ಶಿಷ್ಯಭಕ್ತರು ತಮ್ಮ ಗುರುವರ್ಯರ ವರ್ಧಂತಿ ಆಚರಣೆಗೆ ಸರ್ವ ಅವಕಾಶಗಳಿವೆ. ಇದಕ್ಕೆ ಆದಿಭಗವತ್ಪಾದ ಶ್ರೀ ಶಂಕರಾಚಾರ್ಯ ಗುರುವರ್ಯರು ಮೊದಲಾದ ಅನೇಕಾನೇಕ ಯತಿವರ್ಯರುಗಳ ಜಯಂತಿ ಆಚರಣೆಯೇ ನಿದರ್ಶನವಾಗಿದೆ ಎಂದರು.

ದೀಪ ಪ್ರಜ್ವಲನೆಯಿಂದ ಶಿಷ್ಯರು ವರ್ಧಂತಿ ಆಚರಿಸಿದರೆ, ಸಾಮಾನ್ಯರ ಹುಟ್ಟು ಹಬ್ಬದಲ್ಲಿ ದೀಪ ಆರಿಸುವ ವಿಕಟ ಪರಂಪರೆಯಿದೆ. ಆದರೆ, ಯತಿ ವರ್ಧಂತಿಯಲ್ಲಿ ಆಡಂಬರ, ವೈಭವ ವೈವಿಧ್ಯಗಳಿಗೆ ಅವಕಾಶವಿಲ್ಲ. ಶಿಷ್ಯಂದಿರು ಆಚರಿಸುವ ವರ್ಧಂತಿಯಲ್ಲಿ ಧರ್ಮಕಾರ್ಯಗಳು, ಸನಾತನ ಧರ್ಮ ರಕ್ಷಣೆ, ಗೋ ಮತ್ತು ಪರಿಸರ ಸೇವೆಗಳು ವಿಜೃಂಭಿಸಿದರೆ ಅದು ನಿಜಾರ್ಥದ ಯತಿ ವರ್ಧಂತಿಯಾಗಿದೆ ಎಂದು ತಿಳಿಸಿದರು.

ಸರ್ವ ಸಮರ್ಪಣೆ: ಶಿಷ್ಯಭಕ್ತರು ಆಚರಿಸಿದ ಇಂದಿನ ವರ್ಧಂತಿಯಲ್ಲಿ ಶ್ರೀಮಠದ ಮಾತೃತ್ವಂ ವಿಭಾಗದಿಂದ 50 ಲಕ್ಷ ರೂ. ಮತ್ತು ವೈದಿಕ ವಿಭಾಗದಿಂದ 18 ಲಕ್ಷ ರೂ ಸಮರ್ಪಿತವಾಗಿದೆ. ಇವೆಲ್ಲವುಗಳು ಈ ಸಮಾಜದ ಮತ್ತು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಎರಡು ಕಣ್ಣುಗಳಾದ ಹವ್ಯಕ ಮಹಾಮಂಡಲ ನಡೆಸುತ್ತಿರುವ ಪರಂಪರಾ ಮತ್ತು ಶಿವ ಗುರುಕುಲಂಗಳಿಗೆ ಸಲ್ಲಿತವಾಗುತ್ತಿವೆ. ಈ ಮೂಲಕ ಈ ಸಂಸ್ಥೆಗಳಿಂದ ದೇಶಕ್ಕೆ ಪ್ರತಿಭಾ ಪ್ರಕಾಶಿತ ಸುವಿದ್ಯಾ ಪಟುಗಳು ಮತ್ತು ಸನಾತನ ಧರ್ಮರಕ್ಷಕ ವಿದ್ವನ್ ಮಣಿಗಳು ಹೆಚ್ಚು ಹೆಚ್ಚು ಹೊರಬರುವಂತಾಗಲಿ. ಶ್ರೀಮಠದಲ್ಲಿ ಈ ವರ್ಧಂತಿ ಪರಂಪರೆ ನಾಡಿನ ಅಕ್ಷೀಣ ಶಕ್ತಾ್ಯತ್ಮಕ ಸನ್ನಿಧಿ ಹೊರನಾಡ ಕ್ಷೇತ್ರದಿಂದ ಮೊದಲು ಶುಭಾರಂಭಗೊಂಡು ಇವತ್ತು ಸಶಕ್ತವಾದ ಧಾರ್ವಿುಕ ಮತ್ತು ಸಾಮಾಜಿಕ ಸಕಾರ್ಯಗಳ ಮೂಲಕ ಮುನ್ನಡೆದಿರುವುದು ಶ್ರೀಮಠದಲ್ಲಿನ ಸರ್ವಕಾಲೀನ ದಾಖಲೆಯಾಗಿದೆ. ಇಂತಹ ವರ್ಧಂತಿ ಶಿಷ್ಯಭಕ್ತರಾದ ನಿಮ್ಮೆಲ್ಲರ ಬದುಕಿನಲ್ಲಿಯೂ ಬೆಳವಣಿಗೆಯನ್ನು ತಂದು ಸಲ್ಲದ ಕಳೆಯೆಲ್ಲ ಕಳೆದು ಸಮೃದ್ಧ ಬೆಳೆ ಬೆಳೆದು ಬಾಳು ನಂದನವಾಗಲಿ ಎಂದು ಆಶೀರ್ವದಿಸಿದರು.

ವರ್ಧಂತಿಯನ್ನು ಶ್ರೀಮಾತೆಯವರಾದ ವಿಜಯಲಕ್ಷ್ಮೀ ದೀಪ ಬೆಳಗಿಸಿ ಉದ್ಘಾಟಿಸಿದರು. ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಭೀಮೇಶ್ವರ ಜೋಶಿ ದಂಪತಿ ಸರ್ವಸೇವೆಗಳನ್ನು ನೆರವೇರಿಸಿದರು. ಶ್ರೀಮಠದ ಮಾತೃತ್ವಂ ವಿಭಾಗ, ಯುವ ಮತ್ತು ವಿದ್ಯಾರ್ಥಿ ವಿಭಾಗ ಹಾಗೂ ಹವ್ಯಕ ಮಹಾಮಂಡಲಗಳಿಂದ ವಿವಿಧ ಧಾರ್ವಿುಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ವರ್ಧಂತಿ ನಿಮಿತ್ತ ನಡೆದವು.

ಕಾರ್ಯಕ್ರಮದಲ್ಲಿ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಜೆ.ಎಲ್. ಗಣೇಶ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಗೋಳಗೋಡು, ಕೆಕ್ಕಾರು ರಾಮಚಂದ್ರ ಭಟ್ಟ, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಚಾತುರ್ವಸ್ಯ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ, ಧರ್ಮಕರ್ಮ ವಿಭಾಗದ ಕೊಟೇಲು ರಾಮಕೃಷ್ಣ, ವಿಷ್ಣುಗುಪ್ತ ವಿ.ವಿ. ಗೌರವಾಧ್ಯಕ್ಷ ಡಿ.ಡಿ. ಶರ್ಮ, ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ ಮತ್ತಿತರರಿದ್ದರು. ಗಣೇಶ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net